Thursday, February 11, 2010

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ: ಹಾಗೆಂದರೇನು?

2008ರ ಅಕ್ಟೋಬರ್‍ ೩೧ರಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವೆ, ಅಂಬಿಕಾ ಸೋನಿ ಒಂದು ಅಧಿಕೃತ ಹೇಳಿಕೆಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಕೇಂದ್ರ ಸರಕಾರವು “ಶಾಸ್ತ್ರೀಯ ಭಾಷೆ” ಎಂದು ಪರಿಗಣಿಸಿರುವುದಾಗಿ ಘೋಷಿಸಿದರು. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ತಮ್ಮ ತಮ್ಮ ರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ (ನವೆಂಬರ್‍ ೧) ಈ ಘೋಷಣೆ ಹೊರಬಂದಿತ್ತು. ಇದರೊಂದಿಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಒತ್ತಾಯಿಸುತ್ತಿದ್ದ ಕರ್ನಾಟಕ ಮತ್ತು ಆಂಧ್ರದ ಜನತೆಯ ಪ್ರಯತ್ನ ಅಂತೂ ಫಲ ಕೊಟ್ಟಿತು. ಆದರೂ ಅದಕ್ಕೊಂದು ಕೊಕ್ಕೆ ಇತ್ತು .ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ನೀಡುವುದರ ವಿರುದ್ಧ ಚೆನ್ನೈ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯ ತೀರ್ಮಾನಕ್ಕೆ ಸರಕಾರದ ಈ ನಿರ್ಣಯ ಬದ್ಧವಾಗಿತ್ತು.

ಶಾಸ್ತ್ರೀಯ ಭಾಷೆ ಸ್ಥಾನಮಾನ ಎಂಬುದು ನಮ್ಮಲ್ಲಿ ಹೆಚ್ಚು ಹೆಚ್ಚು ಕೇಳಿ ಬಂದಿರುವುದು ಕಳೆದ ಐದು ವರ್ಷಗಳಲ್ಲಿ ಮಾತ್ರ. ಶಾಸ್ತ್ರೀಯ ಭಾಷೆ ಎಂದರೇನು ? ಆದಕ್ಕೇಕೆ ಇಷ್ಟು ಸ್ಥಾನಮಾನ?.

ಇದನ್ನು ತಿಳಿದುಕೊಳ್ಳಲು ತುಸು ಇತಿಹಾಸದತ್ತ ನೋಡಬೇಕು. ಬ್ರಿಟಿಶರು ಭಾರತವನ್ನು ಆಳುತ್ತಿದ್ದಾಗ ಸಂಸ್ಕೃತ, ಅರಬಿ ಮತ್ತು ಫಾರಸೀ ಭಾಷೆಗಳನ್ನು “ಶಾಸ್ತ್ರೀಯ ಭಾಷೆ” (Classical Language) ಗಳೆಂದು ಘೋಷಿಸಿ ಅವುಗಳ ಕಲಿಕೆಗಾಗಿ, ಬೆಳವಣಿಗೆಗಾಗಿ ವಿಶೇಷ ಸವಲತ್ತುಗಳನ್ನೂ , ಧನಸಹಾಯವನ್ನೂ ಜಾರಿಮಾಡಿದರು. ಅಂದಿನ ಯೂರೋಪಿನಲ್ಲಿ ಪ್ರಚಲಿತವಿದ್ದ, ಶಾಸ್ತ್ರೀಯ ಭಾಷೆ ಎಂದರೆ ಸದ್ಯ ಹೆಚ್ಚು ಬಳಕೆಯಲ್ಲಿಲ್ಲದ ಪ್ರಾಚೀನ ಭಾಷೆ ಎಂಬ ನಂಬಿಕೆಯ ಮೇರೆಗೆ, ಸಂಸ್ಕೃತಕ್ಕೆ ಆ ಪಟ್ಟ ಸಿಕ್ಕರೂ , ಅರಬೀ ಮತ್ತು ಫಾರಸೀ ಭಾಷೆಗಳೂ ಆ ಪಟ್ಟಿಯಲ್ಲಿ ಸೇರಲು, ಮೊಘಲ್ ರಾಜ್ಯಗಳಲ್ಲಿ ಅವುಗಳಿಗೆ ಸಿಕ್ಕಿದ್ದ ರಾಜಾಶ್ರಯವೂ ಕಾರಣವಾಯಿತು.

ಇದು ಕೆಲವು ತಮಿಳು ವರ್ಗಗಳಲ್ಲಿ ಅಸಮಾಧಾನವನ್ನು ಹುಟ್ಟಿಸಿ, ತನ್ನದೇ ಆದ ಲಿಪಿ, ವ್ಯಾಕರಣ, ಪ್ರಾಚೀನತೆ ಇತ್ಯಾದಿ ಇರುವ ತಮಿಳಿಗೂ ಈ ಪಟ್ಟ ಸಿಗಬೇಕು ಎಂಬ ಬೇಡಿಕೆ ಶುರುವಾಯಿತು. ಆದರೆ ಈ ಬೇಡಿಕೆ ಹೆಚ್ಚು ವ್ಯಾಪಕವಾಗಿ ಬೆಳೆಯದೆ , ಸುಪ್ತವಾಗಿಯೇ ಇತ್ತು ಎನ್ನಬೇಕು.

ಸ್ವಾತಂರ್ತ್ಯ ಹೋರಾಟದ ಕಾಲದಲ್ಲಿ ಭಾಷೆ ರಾಜಕೀಯ ಮಹತ್ವವನ್ನು ಪಡೆದುಕೊಂಡಿತು. ಚರಕಾ, ಸ್ವದೇಶಿಯೊಂದಿಗೆ , ಹಿಂದಿ ಭಾಷೆಯನ್ನೂ ರಾಷ್ಟ್ರ ಭಕ್ತಿಯ ಭಾವನೆಗಳ ಸಂಕೇತವಾಗಿ ಗುರುತಿಸಲಾಯಿತು. ಸಂಸತ್ತಿನಲ್ಲಿ ಭಾಷೆಗಳ ಬಗ್ಯೆ ಅನೇಕ ಚರ್ಚೆಗಳಾದವು. ಹಿಂದಿಯೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಮೂಲ ಭಾಷೆ ಎಂಬ ಕಾರಣದಿಂದ ಸಂವಿಧಾನದ ೩೫೧ನೆಯ ಕಲಮಿನಲ್ಲಿ ಸಂಸ್ಕೃತಕ್ಕೆ ವಿಶೇಷ ಸ್ಥಾನವನ್ನು ಕಲ್ಪಿಸಲಾಯಿತು.

೨೦ನೆಯ ಶತಮಾನದ ಉತ್ತರಾರ್ಧದಲ್ಲಿ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನದ ಬಗ್ಯೆ ಮತ್ತೆ ಕೂಗು ಕೇಳಿಬರತೊಡಗಿದರೂ, ಅದಕ್ಕೆ ನಿಜವಾದ ಜೀವ ಬಂದದ್ದು , ಆ ಶತಮಾನದ ಕೊನೆಯಲ್ಲಿ . ೨೦೦೦ನೆಯ ಇಸವಿಯಲ್ಲಿ ಅಮೆರಿಕಾದ ಬರ್ಕ್ಲಿಯಲ್ಲಿಯ, ಪ್ರಸಿದ್ಧ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಮಿಳು ಪೀಠದ ಮುಖ್ಯಸ್ಥ ಪ್ರೊ. ಜಾರ್ಜ್ ಹಾರ್ಟ್ ಎಂಬ ವಿದ್ವಾಂಸ , ಸಾಹಿತ್ಯದ ಪುರಾತನತೆ, ಸಂಸ್ಕೃತದ ಆಧಾರವಿಲ್ಲದೆಯೇ ಬೆಳೆದಿರುವಿಕೆ, ಹಾಗೂ ಸಂಸ್ಕೃತ, ಚೀಣಿ, ಪರ್ಷಿಯನ್ ಇತ್ಯಾದಿ ಜಗತ್ತಿನ ಮಹಾಭಾಷೆಗಳ ಸಾಹಿತ್ಯದೊಂದಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಸಾಹಿತ್ಯ ಗುಣಮಟ್ಟ, ಹಾಗೂ ಆಧುನಿಕ ಭಾರತದ ಸಂಸ್ಕೃತಿ ಮತ್ತು ಪರಂಪರೆಗಳ ಮೂಲಗಳಲ್ಲಿ ಒಂದು ಎಂಬ ಕಾರಣಗಳನ್ನು ಕೊಟ್ಟು ತಮಿಳು (ಮತ್ತು ತಮಿಳು ಮಾತ್ರವೇ !) ಶಾಸ್ತ್ರೀಯ ಭಾಷೆಯಾಗಲು ಅರ್ಹ ಎಂಬ ಅಭಿಪ್ರಾಯಪಟ್ಟ.

೨೦೦೪ರ ಮಹಾಚುನಾವಣೆಯ ಸಂದರ್ಭದಲ್ಲಿ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷೆಯ ಪಟ್ಟ ಗಳಿಸಿಕೊಡುವ ಭರವಸೆ ನೀಡಿತು. ಚುನಾವಣೆಯ ನಂತರ ಯುಪಿಯ ಸರಕಾರದ ಅಂಗವಾದ ಡಿಎಂಕೆ, ಈ ವಿಷಯವನ್ನು ಯೂಪಿಯೆ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಸೇರಿಸುವುದರಲ್ಲಿ ಯಶಸ್ವಿಯಾಯಿತು.

ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕೇಂದ್ರ ಸರಕಾರ ನೇಮಿಸಿದ ತಜ್ಞರ ಸಮಿತಿಯೊಂದು ಒಂದು ಭಾಷೆಯನ್ನು ಶಾಸ್ತ್ರೀಯ ಎಂದು ಘೋಷಿಸಲು ಕೆಲವು ಮಾನದಂಡಗಳನ್ನು ಸೂಚಿಸಿತು.
· ೧೫೦೦-೨೦೦ ವರ್ಷಗಳಷ್ಟು ಪುರಾತನ ಲಿಪಿ ಅಥವಾ ದಾಖಲಾಗಿರುವ ಇತಿಹಾಸವಿರಬೇಕು
· ಆ ಭಾಷೆಯನ್ನಾಡುವವರು ಅನೇಕ ಪೀಳಿಗೆಗಳಿಂದ ತಮ್ಮ ಅಮೂಲ್ಯ ಪರಂಪರೆ ಎಂದು ಪರಿಗಣಿಸುವ ಪುರಾತನ ಸಾಹಿತ್ಯವಿರಬೇಕು .
· ಈ ಸಾಹಿತ್ಯ ಪರಂಪರೆ ಬೇರಾವುದೇ ಭಾಷಾ ಸಮುದಾಯದ ಕವಲಾಗಿ ಬೆಳೆಯದೆ,ತಾನೇ ತಾನಾಗಿ ಅಭಿವೃದ್ಧಿಯಾಗಿರಬೇಕು.
· ಈ ಶಾಸ್ತ್ರೀಯ ಸ್ವರೂಪದ ಪುರಾತನ ಭಾಷೆ ಹಾಗೂ ಸಾಹಿತ್ಯ ,ಅವುಗಳ ಆಧುನಿಕ ಸ್ವರೂಪದಿಂದ ವಿಶಿಷ್ಟವಾಗಿದ್ದು , ಇವೆರಡು ಸ್ವರೂಪಗಳ ನಡುವಿನ ಕೆಲ ಕೊಂಡಿಗಳು ಕಳಚಿರುವ ಸಾಧ್ಯತೆಗಳೂ ಇರಬಹುದು.

ಈ ಸೂಚನೆಗಳನ್ನು ಅಂಗೀಕರಿಸಿದ ಸರಕಾರವು, ೨೦೦೪ರಲ್ಲಿ ಈ ಮಾನದಂಡಗಳನ್ನು ಅನ್ವಯಿಸಿ, ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಇದರ ಹಿಂದೆಯೇ , ೨೦೦೫ರಲ್ಲಿ ಸಂಸ್ಕೃತಕ್ಕೂ ಈ ಪಟ್ಟವನ್ನು ನೀಡಲಾಯಿತು.

ಇದು ಕರ್ನಾಟಕ (ಮತ್ತು ಆಂಧ್ರ) ದಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿತು. ಈ ಎಲ್ಲಾ ಮಾನದಂಡಗಳೂ ತಮಿಳಿನಷ್ಟೇ ಅನ್ವಯವಾಗುವ ಕನ್ನಡಕ್ಕೇಕೆ ಶಾಸ್ತ್ರೀಯ ಭಾಷಾ ಸ್ಥಾನವಿಲ್ಲ ಎಂಬ ಪ್ರಶ್ನೆಯನ್ನು ಕನ್ನಡದ ಬುದ್ಧಿಜೀವಿಗಳು, ಸಾಹಿತಿಗಳು, ಭಾಷಾತಜ್ಞರುಗಳು ಕೇಳತೊಡಗಿದರು.

ತಮಿಳು ಮತ್ತು ಕನ್ನಡ ಎರಡೂ ಪ್ರೋಟೋ-ದ್ರವಿಡಿಯನ್ ಭಾಷಾ ಬೇರಿನಿಂದ ಹುಟ್ಟಿದವುಗಳಾದ್ದರಿಂದ , ತಾನೇ ತಾನಾಗಿ ಬೆಳೆದಿರಬೇಕು ಎಂಬ ಮಾನದಂಡವನ್ನು ಅನ್ವಯಿಸಲಾಗದು . ಆದ್ದರಿಂದ ಇವೆರಡೂ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ಕೊಡಬಾರದು ಎಂಬ ಅಭಿಪ್ರಾಯಗಳೂ ಬಂದವು.
ಕೊಡಗಿನ ಬ್ರಹ್ಮಗಿರಿಯಲ್ಲಿ ಸಿಕ್ಕಿದ , ಕ್ರಿ.ಶ. ಒಂದನೆಯ ಶತಮಾನದ, ಅಶೋಕನ ಶಾಸನದಲ್ಲಿ ’ಇಸಿಲ’ ಎಂಬ ಕನ್ನಡ ಶಬ್ದವಿರುವುದು, ಕನ್ನಡದಲ್ಲಿರುವ ೫ನೆಯ ಶತಮಾನದ ಹಲ್ಮಿಡಿ ಶಾಸನ, ಒಂಭತ್ತನೆಯ ಶತಮಾನದ ಕನ್ನಡದ ಪ್ರಸಿದ್ಧ ಕೃತಿ “ಕವಿರಾಜಮಾರ್ಗ” ಹೀಗೆ ಪುರಾತನ ಹಾಗೂ ಶ್ರೀಮಂತ ಭಾಷಾ, ಸಾಹಿತ್ಯಿಕ ಪರಂಪರೆಯಿರುವ ಕನ್ನಡಕ್ಕೇಕಿಲ್ಲ ಶಾಸ್ತ್ರೀಯ ಸ್ಥಾನ ಎಂಬ ಧ್ವನಿಗಳು ದೊಡ್ಡದಾಗತೊಡಗಿದವು.
ಈ ಪ್ರತಿಭಟನೆಗೆ ದೇ.ಜವರೇಗೌಡ, ಪ್ರೊ. ಚಿದಾನಂದಮೂರ್ತಿ, ಎಲ್.ಎಸ್.ಶೇಷಗಿರಿರಾವ್, ಪ್ರೊ.ಜಿ.ಎಸ್. ಶಿವರುದ್ರಪ್ಪ ಮೊದಲಾದ ಹಿರಿಯರು ದನಿಗೂಡಿಸಿದರು. ಇತರ ಕನ್ನಡ ಸಂಘಸಂಸ್ಥೆಗಳು, ರಾಜಕೀಯ ಧುರೀಣರು ಇತ್ಯಾದಿಗಳು ಕೂಡಾ ಇದಕ್ಕೆ ಕೈಜೋಡಿಸಿದರು.

ಈ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರವು ಈ ವಿಷಯವನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ದಾಖಲೆಗಳನ್ನು ಪರಿಶೀಲಿಸಿ, ಕನ್ನಡ ಮತ್ತು ತೆಲುಗು ಭಾಷೆಗಳು ಶಾಸ್ತ್ರೀಯ ಭಾಷೆಗಳಾಗಲು ತಕ್ಕವು ಎಂದು ಶಿಫಾರಸು ಮಾಡಿತು.
ಇಷ್ಟರಲ್ಲಿಯೇ, ಈ ತಜ್ಞರ ಸಮಿತಿಯ ನಿರ್ಣಯದ ವಿರುದ್ಧ ತಮಿಳುನಾಡಿನವರೊಬ್ಬರು ಕೋರ್ಟಿಗೆ ಹೋಗಿಯಾಗಿತ್ತು. ಈ ಪ್ರಕರಣ ಚೆನ್ನೈ ಹೈಕೋರ್ಟಿನಲ್ಲಿ ಇನ್ನೂ ಇತ್ಯರ್ಥವಾಗಬೇಕಾಗಿದೆ. .
ಈ ಮಧ್ಯೆ ಕೇಂದ್ರ ಸರಕಾರವು ಅಕ್ಟೋಬರ್‍ ೩೧, ೨೦೦೮ ರಂದು ಇವೆರಡೂ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಪಟ್ಟ ಕೊಡುವ ಘೋಷಣೆ ಮಾಡಿತು , ಮುಂದೆ ನ್ಯಾಯಾಲಯ ನೀಡಬಹುದಾದ ತೀರ್ಪಿಗೆ ಈ ತೀರ್ಮಾನವು ಬದ್ಧವಾಗಿದೆ.
ಶಾಸ್ತ್ರೀಯ ಭಾಷೆಯಾದರೆ ಏನು ಲಾಭ? ಈ ಭಾಷೆಯ ವಿದ್ವಾಸರುಗಳಿಗೆ ಪ್ರತಿ ವರ್ಷ ಎರಡು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು , ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಭಾಷಾ ಅಧ್ಯಯನಕ್ಕಾಗಿ ಪೀಠ ಸ್ಥಾಪನೆ, ಭಾಷೆಯ ಬೆಳವಣಿಗೆಗೆ ೧೦೦ ಕೋಟಿರೂ ವರೆಗೆ ಸರಕಾರದ ದೇಣಿಗೆ, ಕನ್ನಡ ಅಧ್ಯಯನ ಕೇಂದ್ರಗಳ ಸ್ಥಾಪನೆ , ಕನ್ನಡದಲ್ಲಿ ಸಂಶೋಧನೆಗೆ ಅನುವು ಇತ್ಯಾದಿಗಳು ಈ ಪಟ್ಟದಿಂದ ದೊರಕಬಹುದು ಎಂದು ಹೇಳಲಾಗಿದೆ.
ವಿವಿಧ ಮೂಲಗಳಿಂದ ಸಂಗ್ರಹ