Saturday, July 16, 2011

ನನ್ನ ಹಿಂದೂ ದ್ವಂದ್ವ

ನಾನೊಬ್ಬ ಹಿಂದೂ.
ವೇದ ,ಶಾಸ್ತ್ರ ಓದಿಕೊಂಡಂಥ ಸಂಪ್ರದಾಯಸ್ಥ ಕರ್ಮಠ ಹಿಂದೂ ಅಲ್ಲ. ಏನೋ ಅಲ್ಪ ಸ್ವಲ್ಪ ತಿಳಿದುಕೊಂಡು, ಆದಷ್ಟು ಆಗಾಗ ಆಚಾರ ಮಾಡಿಕೊಂಡು ಬದುಕಿರುವವನು.
ನನಗೆ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ಜಾಗದಲ್ಲಿ ಮಸೀದಿಯ ಬದಲು ದೇವಸ್ಥಾನ ಇದ್ದರೆ ಚೆನ್ನಾಗಿರುತ್ತದೆ ಅನ್ನಿಸುತ್ತದೆ. ಆದರೆ, ಅದಕ್ಕಾಗಿ ಅಲ್ಲಿರುವ ಮಸೀದಿ ಬಲವಂತವಾಗಿ ಒಡೆಯಬೇಕಾಗಿತ್ತೆ ಎಂಬ ಬಗ್ಯೆ ಅನುಮಾನ ಇದೆ.
ಗೋಧ್ರಾದಲ್ಲಿ ೫೦-೬೦ ಹಿಂದೂಗಳನ್ನು ಕೊಂದದ್ದು ಕೇಳಿ ಬಹಳ ಬೇಜಾರಾಗುತ್ತದೆ. ಆದರೆ ಅದರನಂತರದ ಮತೀಯ ಗಲಭೆ ಬಗ್ಯೆ ಓದಿ ಇನ್ನೂ ಹೆಚ್ಚು ಬೇಜಾರಾಗುತ್ತದೆ. ಅದರ ಬಗ್ಯೆ ಪತ್ರಿಕೆಗಳಲ್ಲಿ ಟಿ.ವಿಯಲ್ಲಿ , ಅದರಲ್ಲೂ ಇಂಗ್ಲೀಷ್ ಭಾಷೆಯವುಗಳಲ್ಲಿ ನೋಡಿ ಹೀಗಾಗಬಾರದಿತ್ತು ಅನ್ನಿಸುತ್ತದೆ. ಆದರೆ, ಅದನ್ನೇ ಮತ್ತೆ ಮತ್ತೆ ಹೇಳುವುದು, ಬರೆಯುವುದು, ತೌಡು ಕುಟ್ಟುವುದು ನೋಡಿ ರಗಳೆಯೂ ಆಗುತ್ತದೆ. ಅದರೊಂದಿಗೇ, ಗೋಧ್ರಾದಲ್ಲಿ ಸತ್ತವರ ಬಗ್ಯೆ ಸುದ್ದಿಯೇ ಬರುವುದಿಲ್ಲವಲ್ಲ ಎಂದು ಸೋಜಿಗವೂ ಆಗುತ್ತದೆ.
ಮಿಷನರಿಗಳ ಮತಾಂತರದ ಬಗ್ಯೆ ಅಸಮಾಧಾನವಾಗುತ್ತದೆ. ಇದರ ಬಗ್ಯೆ ಯಾಕೆ ನಮ್ಮ ಪತ್ರಿಕೆಗಳಲ್ಲಿ ಬರುವುದೇ ಇಲ್ಲವಲ್ಲ ಅಂತ ಮತ್ತೆ ಅಚ್ಚರಿಯಾಗುತ್ತದೆ. ಆದರೆ , ಮಿಷನರಿ ಸಂಸಾರವನ್ನು ಜೀವಂತ ಸುಟ್ಟಾಗ ಛೇ , ಎಂಥಾ ಹೇಯ ಕೆಲಸ ಅಂತ
ಮನಸ್ಸು ಹಳಹಳಿಸುತ್ತದೆ.
ಮಂಗಳೂರಿನಲ್ಲಿ ಪಬ್ಬಿನ ಗಲಭೆ ಓದಿ ಎಂಥಾ ಗೂಂಡಾಗಳು ಈ ಶ್ರೀರಾಮ ಸೇನೆಯವರು ಎಂದು ಸಿಟ್ಟು ಬರುತ್ತದೆ. ಹಿಂದೂ ಸಂಸ್ಕೃತಿಗೆ ಮಸಿ ಬಳಿಯುತ್ತಿದ್ದಾರಲ್ಲಾ ಎಂದು ವ್ಯಥೆಯಾಗುತ್ತದೆ. ಆದರೆ ಟಿವಿ ಛಾನಲ್ಲುಗಳಲ್ಲಿ , ಪತ್ರಿಕೆಗಳಲ್ಲಿ ಅದರ ಬಗ್ಯೆ ಪ್ರತಿಕ್ರಿಯೆ , ಆಕ್ರೋಶ , ಪಬ್ ಭರೋ, ಪಿಂಕ್‌ ಚಡ್ಡಿ ಅಂದೋಲನ ಇತ್ಯಾದಿ ಇತ್ಯಾದಿ ನೋಡಿ , ಇಷ್ಟೆಲ್ಲಾ ದೇಶಾದ್ಯಂತ ಪ್ರತಿಕ್ರಿಯೆ ಮಾಡುವಷ್ಟು ಇದರಲ್ಲಿ ಏನಿತ್ತು ಎಂದು ಅರ್ಥವಾಗುವುದಿಲ್ಲ.
ನಮ್ಮೂರಿನ ಉಸ್ಮಾನ್ ಸಾಬಿ ರಸ್ತೆಯಲ್ಲಿ ಸಿಕ್ಕಿದರೆ, ಇವನೂ ಟೆರರಿಸ್ಟ್ ಆಗಿರಬಹುದು ಅನ್ನಿಸುವುದಿಲ್ಲ. ಹಾಗೆಯೇ ತರಕಾರಿ ಮಾರುವ ಬಾಯಮ್ಮ ಎದುರು ಬಂದರೆ ಮತಾಂತರದ ನೆನಪಾಗುವುದಿಲ್ಲ. ಆದರೆ ಮೊಹರಮ್ಮಿನ ದಿನ ಉಸ್ಮಾನನನ್ನು ತಬ್ಬಿಕೊಂಡು ಹಬ್ಬದ ಸಡಗರದಲ್ಲಿ ಪಾಲುಗೊಳ್ಳಬೇಕು ಅನ್ನಿಸುವುದಿಲ್ಲ. ಎಲ್ಲೋ ಎದುರು ಸಿಕ್ಕಿದರೆ ಈದ್ ಮುಬಾರಕ್ ಹೇಳಬಹುದು , ಅಥವಾ ಬಾಯಮ್ಮ ಆದರೆ, “ಏನು ಬಾಯಮ್ಮ ಕ್ರಿಸ್ಮಸ್ ಹಬ್ಬ ಜೋರಾ" ಅಂತ ಕುಶಾಲು ಮಾಡಬಹುದು. ಅಷ್ಟೇ.
ಒಟ್ಟಿನಲ್ಲಿ ಅವರಷ್ಟಕ್ಕೆ ಅವರನ್ನು ಬಿಟ್ಟು ನಮ್ಮಷ್ಟಕ್ಕೆ ನಾವಿರಿವುದು ನನಗೆ ಸಾಕು. ನನ್ನ ಅವರ ವ್ಯವಹಾರಗಳಲ್ಲಿ ಅವರ ಧರ್ಮ ಅಡ್ಡಬರುವುದಿಲ್ಲ. ಆದರೆ , ಮೇಲೆ ಬಿದ್ದು ಸಲಿಗೆ ಮಾಡುವುದೂ ಇಲ್ಲ, ಯಾಕೆಂದರೆ ಅವರು "ನಮ್ಮ ಥರಾ ಅಲ್ಲ"
ಆದರೆ ನನಗೆ ಈಗೀಗ ಹೀಗಿರಲಿಕ್ಕೆ ಬಹಳ ಕಷ್ಟವಾಗುತ್ತಿದೆ. ನಾನು ಮತಾಂತರದ ವಿರುದ್ಧ ಮಾತಾಡಿದರೆ ನಾನು ಬಿಜೆಪಿ ಭಂಟ, ಭೈರಪ್ಪನವರ ಚೇಲಾ ಅಂತ ಜನರಿಗೆ ಗುಮಾನಿ ಬರುತ್ತದೆ. ಹಾಗೇ ಗುಜರಾತಿನಲ್ಲಿ ದಂಗೆ ಆಗಬಾರದಿತ್ತು ಅಂದರೆ , ಇವನ್ಯಾರೋ ಕಾಂಗ್ರೆಸ್ಸಿನವನೋ, ಕಮ್ಯೂನಿಸ್ಟನೋ ಬಂದ ಅನ್ನುತ್ತಾರೆ.
ಒಟ್ಟಿನಲ್ಲಿ ನಾನು ಒಂದೋ ಆ ಬಣದವನು ಇಲ್ಲ ಈ ಬಣದವನು. ಮಧ್ಯದಲ್ಲಿ ಜಾಗವೇ ಇಲ್ಲ !. ಗಡಿಯಾರದ ಪೆಂಡ್ಯುಲಮ್ಮಿನಂತೆ ಒಮ್ಮೆ ಅತ್ತ , ಒಮ್ಮೆ ಇತ್ತ ಜೀಕಲೇ ಬೇಕು. ಮಧ್ಯ ನಿಲ್ಲುವಂತಿಲ್ಲ.
ಜಾರ್ಜ್ ಬುಶ್ ಹೇಳಿದಂತೆ "If you are not with us, you are against us". ಅರ್ಥಾತ್ ನೀನು ಬೀಜೇಪಿ ಅಲ್ಲ ಅಂದರೆ ಕಾಂಗ್ರೆಸ್ ಆಗಿರಲೇ ಬೇಕು. ಹಿಂದೂಗಳನ್ನು ಟೀಕಿಸದೆ ಬುದ್ಧಿಜೀವಿ/ ಸೆಕ್ಯುಲರ್‍ ಆಗಲು ಸಾಧ್ಯವಿಲ್ಲ. ಶಿವಸೇನೆ, ಆರ್‍ ಎಸ್ ಎಸ್ , ಬೀಜೇಪಿ ಗಳನ್ನು ಟೀಕಿಸುವವ ಒಳ್ಳೆಯ ಹಿಂದೂ ಆಗಲು ಸಾಧ್ಯವಿಲ್ಲ.
ತಟಸ್ಥ ನೀತಿಯ ಕಾಲ ಎಂದೋ ಹೊರಟುಹೋಗಿದೆ ಅಂತ ಅನ್ನಿಸುತ್ತಿದೆ.
ನಾನ್ಯಾಕೆ ದೇವಸ್ಥಾನಕ್ಕೆ ಹೋಗುವ ಆದರೆ ಮುಸ್ಲಿಮರನ್ನು ದ್ವೇಷಿಸದ, ಬೀಜೇಪಿ ಒಲ್ಲದ ಆದರೆ ಕಾಂಗ್ರೆಸ್ಸಿಗೂ ಸಲ್ಲದ , ಪ್ರತಿಯೊಂದು ವಿಷಯವನ್ನೂ ಅದರ merit ಮೇಲೆ ನಿರ್ಧರಿಸುವ ಸರ್ವಸಾಧಾರಣ ಮನುಷ್ಯ ಆಗಿರಬಾರದು ?
ಅಲ್ಲವೇ?