Friday, October 28, 2011

ಸ್ತ್ರೀ ಸಮಾನತೆ : ಎರಡು ಮುಖಗಳು

ಮುಖ ೧:

ಗಂಡಾಗಲಿಲ್ಲವಲ್ಲ

ಎಂದು ಕೊರಗುತ್ತಿದ್ದ ಅಪ್ಪನ

ಮಗಳು

ಮೊದಲ ಸಂಬಳದ

ದೊಡ್ಡ ಮೊತ್ತ ಕೈಯಲ್ಲಿಟ್ಟು

ಹೆಮ್ಮೆಯ ನಗು ನಕ್ಕಾಗ

ಅಪ್ಪನ ಕಣ್ಣಲ್ಲಿ ನೀರು

----------------------------------------------------------------------

ಮೊಮ್ಮಗಳು ಲೀಲಾಜಾಲವಾಗಿ

ಕಾರು ಓಡಿಸುವುದು, ಆಫೀಸಿಗೆ ಹೋಗುವುದು

ಇವೆಲ್ಲಾ ನೋಡಿ

ಆಯ್ಯೋ ಮುಂಡೇದೇ,

ಹೆಂಗಸರು

ಇಷ್ಟೆಲ್ಲಾ ಮಾಡಬಹುದು ಅಂತಾ

ಗೊತ್ತೇ ಇರಲಿಲ್ಲವೇ

ಎಂದು ಅಜ್ಜಿ ಮೂಗಿನ ಮೇಲೆ ಬೆರಳಿಟ್ಟಳು.

--------------------------------------------------------------------------

ಬಾಕಿ ಹುಡುಗರು

ನನಗೆ ಬೈಯ್ತಾರೆ ಅಂತ

ಅಳುತ್ತಾ ಬಂದ

ತಮ್ಮನ

ಸಮಾಧಾನಿಸಿದ ಅಕ್ಕ

ಹುಡುಗರಿಗೆ ಕಿವಿ ಹಿಂಡಿ,

ತಪರಾಕಿ ಕೊಟ್ಟು

ತಮ್ಮನ್ನ ಆಟಕ್ಕೆ ಸೇರಿಸಿ ಬಂದಳು.

--------------------------------------------------------------------------------

ಅಡಿಗೆಮೂಲೆಯ ಮಡಿಕೆ ಕುಡಿಕೆಯಲ್ಲಿ

ಸಂಜೆಯ ಕುಡಿತಕ್ಕೆ

ಚಿಲ್ಲರೆ ಕಾಸು ಹುಡುಕುತ್ತಿದ್ದ

ಅಪ್ಪನಿಗೆ

ಸಣ್ಣ ಮಗಳು ತಮಾಷೆಗೆ

"ಅಮ್ಮ ಬಂದಳು"

ಎನ್ನಲು

ಅಪ್ಪ ಸತ್ತೆನೋ ಕೆಟ್ಟೆನೋ ಎಂದು ಪರಾರಿಯಾದ.

-----------------------------------------------------------------------------------------

ಮುಖ ೨

ಪುರುಷರಿಗೆ ನಾವೇನು ಕಡಿಮೆ

ಎಂದು ಘೋಷಣೆ ಕೂಗಿ ದಣಿದು

ಮನೆಗೆ ಬಂದವಳಿಗೆ

ಗಂಡನ ನಿರೀಕ್ಷೆಯ ಪ್ರಮೋಷನ್

ಮಹಿಳಾ ಸಹೋದ್ಯೋಗಿಗೆ ಸಿಕ್ಕಿತು ಎಂದಾಗ

ಬಿನ್ನಾಣಗಿತ್ತಿಯ

ಮುಖಾ ನೋಡಿ ಕೊಟ್ಟಿರಬಹುದು

ಎಂದು ನೆಟಿಗೆ ಮುರಿದಳು

---------------------------------------------------------------------------------

ಮದುವೆಗೆ ಮುಂಚೆ

ಗಂಡನ ಮನೆಯಲ್ಲಿ ಯಾಕಿರಬೇಕು?

ಗಂಡನ ಹೆಸರು ನಾನೇಕೆ ತೊಡಬೇಕು?

ಎಂದೆಲ್ಲಾ ಕೇಳುತ್ತಿದ್ದ ಹುಡುಗಿ

ನಂತರ

ಮಾವನ ಆಸ್ತಿ ಪಾಲು ಮಾಡುವಾಗ

ದೊಡ್ಡ ಪಾಲು

ನನಗಿರಲಿ ಅಂದಳು

--------------------------------------------------------------------------

ಆಫೀಸಿನಲ್ಲಿ

ಫೈರ್‍ ಬ್ರಾಂಡ್ ಎಂದು ಹೆಸರಾದ

ಆಕೆ

ಮನೆಯಲ್ಲಿ ರಾತ್ರಿ

ಇಲಿ ಓಡಾಡಿದ ಶಬ್ದವಾಗಲು

ಗಡಬಡಿಸಿ

ಟೇಬಲ್ ಹತ್ತಿ ನಿಂತು

ಗಂಡನಿಗೆ

ರೀ ಅಂದಳು.

------------------------------------------------------------------------------

ತಡವಾದ ಕಾರಿಗಾಗಿ

ಕಾಯುತ್ತಿದ್ದ

ಅಧಿಕಾರಿಣಿ

ಮಗಳಿಗೆ ಹುಷಾರಿರಲಿಲ್ಲ ಅಮ್ಮಾವ್ರೆ

ಎನ್ನುತ್ತಿದ್ದ ಡ್ರೈವರನ

ಕೆನ್ನೆಗೆ ಬಿಗಿದಳು

Sunday, October 9, 2011

ಕೈಲಾಸಂ ಎಂಬ ದುರಂತ ದಂತಕಥೆ

ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹೋಗಿದ್ದಾರೆ. ಅವರು ಇಲ್ಲವಾಗಿ ಆರು ದಶಕಗಳು ಮೀರಿದ್ದರೂ, ಇಂದಿಗೂ ಅವರ ಬಗೆಗಿನ ಕುತೂಹಲ, ಆದರಾಭಿಮಾನ , ಕನ್ನಡಿಗರಲ್ಲಿ ಜಾಗೃತವಾಗಿದೆ.


ತ್ಯಾಗರಾಜ ಪರಮಶಿವ ಕೈಲಾಸಂರ ಪೂರ್ವಜರು ತಮಿಳುನಾಡಿನ ತಂಜಾವೂರು ಕಡೆಯವರು. ದಿವಾನ್ ಶೇಷಾದ್ರಿ ಅಯ್ಯರ್ ಕಾಲದಲ್ಲಿ ಮೈಸೂರಿಗೆ ಬಂದು ನೆಲೆಸಿದವರು.ಅವರ ತಂದೆ ಪರಮಶಿವ ಅಯ್ಯರ್ ಮೈಸೂರಿನ ಛೀಫ್ ಕೋರ್ಟಿನ ಜಡ್ಜಿಯಾಗಿದ್ದರು. ಇಂಥಾ ಆಢ್ಯ ಮನೆತನದಲ್ಲಿ ಜನ್ಮ ತಳೆದವರು ಕೈಲಾಸಂ.


ಹುಟ್ಟಿದ ವರ್ಷದ ಬಗ್ಯೆ ಭಿನ್ನಾಭಿಪ್ರಾಯಗಳಿದ್ದರೂ, ೧೮೮೪ರ ಜುಲೈ ೨೭ ಅವರ ಹುಟ್ಟಿದ ದಿನ ಎಂದು ಸಾಧಾರಣವಾಗಿ ಒಪ್ಪಲಾಗಿದೆ. ೧೯೮೪ರಲ್ಲಿ ಅವರ ಶತಮಾನೋತ್ಸವವನ್ನು ಕರ್ನಾಟಕ ಮಾತ್ರವಲ್ಲದೇ, ಇತರ ಕಡೆಗಳಲ್ಲಿಯೂ ಆಚರಿಸಲಾಯಿತು. ಹುಟ್ಟಿದ್ದು ಬೆಂಗಳೂರಿನ ’ತಾರಾಮಂಡಲ ಪೇಟೆ’ ಎಂದು ಕರೆಯಲಾಗುತ್ತಿದ್ದ ಪ್ರದೇಶದಲ್ಲಿ. ಇದು ಧರ್ಮರಾಯನ ಗುಡಿ, ಅವೆನ್ಯೂ ರಸ್ತೆ, ಚಿಕ್ಕಪೇಟೆ ಚೌಕ ಇವುಗಳ ಹತ್ತಿರದಲ್ಲಿತ್ತು. ಅಲ್ಲಿ ಪಟಾಕಿ ತಯಾರಿಸುವ ಕೆಲಸ ನಡೆಯುತ್ತಿದ್ದಿದ್ದರಿಂದ ’ತಾರಾಮಂಡಲ ಪೇಟೆ’ ಎಂಬ ಹೆಸರು ಬಂದಿತ್ತು. ಅವರ ತಂದೆ ವರ್ಗವಾದ ಕಡೆಗಳಲ್ಲಿ ಬೆಂಗಳೂರು, ಹಾಸನ ಇತ್ಯಾದಿ, ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಹೈಸ್ಕೂಲು ಕೆಲಕಾಲ ಮೈಸೂರಿನಲ್ಲಿ ನಡೆಯಿತು. ಆಗ ಅವರ ಹಾಸ್ಟೆಲ್ ಸಹಪಾಠಿಗಳು ಬಿ.ಎಂ.ಶ್ರೀ ಮತ್ತು (ಮುಂದೆ ಪ್ರೋ.) ಎನ್.ಎಸ್. ಸುಬ್ಬರಾಯರು. ಮೆಟ್ರಿಕ್ಯುಲೇಷನ್ನಿಗೆ ಮದರಾಸಿಗೆ ಹೋಗಿ ಅಲ್ಲಿ ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಗಳ ಪ್ರಿಯ ಶಿಷ್ಯರಾದರು. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಇಡೀ ಮದರಾಸು ಪ್ರಾಂತ್ಯಕ್ಕೇ ಮೊದಲಸ್ಥಾನ ಗಳಿಸಿ ಬಿ.ಎ ತೇರ್ಗಡೆಯಾದರು. ಇದಕ್ಕಾಗಿ ವಿಶ್ವವಿದ್ಯಾನಿಯದ ಕ್ರೋಮಾರ್ಟಿ (Cromarty) ಪದಕವನ್ನು ಪಡೆದರು. ಇದು ನಡೆದದ್ದು ೧೯೦೭ರಲ್ಲಿ.


ಮುಂದೆ ಮೈಸೂರು ಸರಕಾರದ ಸ್ಟೈಪೆಂಡ್ ಪಡೆದು , ಲಂಡನ್ನಿನ Royal School of Scienceನಲ್ಲಿ ಭೂಗರ್ಭಶಾಸ್ತ್ರ ಅಧ್ಯಯನ ಮಾಡಿ ಏಳು ಪಾರಿತೋಷಕಗಳೊಂದಿಗೆ ಉತ್ತೀರ್ಣರಾದರು. Royal Geological Societyಯು ಅವರಿಗೆ Fellow ಗೌರವವನ್ನು ನೀಡಿತು.ಅಲ್ಲಿಯೇ ಮತ್ತೆ ಕೆಲ ವರ್ಷಗಳನ್ನು ಕಳೆದ ಕೈಲಾಸಂ ಅಲ್ಲಿಯ ಕಾರ್ಮಿಕ ವರ್ಗ, ಫುಟ್ ಬಾಲ್, ಹಾಕಿ, ಬಿಲಿಯರ್ಡ್ಸ್ ಇತ್ಯಾದಿ ಆಟಗಳು, ಇಂಗ್ಲೀಷ್ ನಾಟಕಗಳು ಇತ್ಯಾದಿಗಳ ನಿಕಟ ಸಂಪರ್ಕಕ್ಕೆ ಬಂದರು. ಅವರಿಗೆ ಸಹಜವಾಗಿ ಸಿದ್ಧಿಸಿದ್ದ ಅನುಕರಣ ಕಲೆಯಿಂದ ಇಂಗ್ಲೆಂಡಿನ ಸರ್ರೆ, ಸಸೆಕ್ಸ್ , ಐರ್ಲೆಂಡ್ ಇತ್ಯಾದಿ ವಿವಿಧ ಪ್ರದೇಶಗಳ ಜನಸಾಮಾನ್ಯರ , ಶ್ರೀಮಂತರ, ಕಾರ್ಮಿಕರ ಮಾತನಾಡುವ ವೈಖರಿಗಳನ್ನು ಅನುಕರಿಸಿ ತೋರಿಸುತ್ತಿದ್ದರು. ಅವರ ಈ ಅಣಕವಾಡಿನ ವಿನೋದವನ್ನು ಸವಿಯುವುದಕ್ಕೆ ಅವರ ಸ್ನೇಹಿತರು ಗುಂಪು ಸೇರುತ್ತಿದ್ದರು. ಕೈಲಾಸಂ ಎಂಬ ದಂತಕಥೆಯ ಪ್ರಾರಂಭ ಆಗತೊಡಗಿತ್ತು. ಅದರೊಂದಿಗೇ , ಅಲ್ಲಿಯ ನಾಟಕಮಂದಿರಗಳು, ಮ್ಯೂಸಿಕ್ ಹಾಲುಗಳ ಮೂಲಕ ಅವರಿಗೆ ಆಧುನಿಕ ಇಂಗ್ಲೀಷ್ ರಂಗಭೂಮಿಯ ಒಳನೋಟ ದೊರಕತೊಡಗಿತ್ತು.


ಅಲ್ಲಿಂದ ಮರಳಿ ಭಾರತಕ್ಕೆ ಬಂದದ್ದು ೧೯೧೫ರಲ್ಲಿ. ಅದೇ ವರ್ಷ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ವೊಡೆಯರು ಅವರನ್ನು ಅರಮನೆಗೆ ಬರಮಾಡಿಕೊಂಡು, ಸಂಸ್ಥಾನದ ಜಿಯಾಲಜಿ ಇಲಾಖೆಯಲ್ಲಿ ಗೆಜೆಟೆಡ್ ಹುದ್ದೆಯಲ್ಲಿ ಪ್ರೊಬೇಷನರ್ ಆಗಿ ನೇಮಿಸಿದರು. ಈ ಕೆಲಸದಲ್ಲಿ ಅವರಿದ್ದದ್ದು ಬಹಳ ಸ್ವಲ್ಪ ಕಾಲವಾದರೂ, ನಿಷ್ಠೆಯಿಂದ ಕೆಲಸ ಮಾಡಿದರು. ಕೋಲಾರದ ಚಿನ್ನದ ಗಣಿ ಹತ್ತಿರ ಅಗೆಸುತ್ತಿದ್ದಾಗ , ಕೆಲಸದವರ ಹತ್ತಿರ ನಿಯತ್ತಿನಿಂದ ಕೆಲಸ ತೆಗೆಯುತ್ತಿದ್ದರು. ಅಷ್ಟೇ ಅಲ್ಲ, ಕೆಲಸದ ಸಮಯ ಮುಗಿದ ಮೇಲೆ, ಕಾರ್ಮಿಕರು ಮನೆಗೆ ಹೋಗಿ, ಉಂಡು ಮತ್ತೆ ಕೈಲಾಸಂ ಡೇರೆಯ ಹತ್ತಿರ ಬರುತ್ತಿದ್ದರು. ಅಲ್ಲಿ ಅವರಿಗೆ ಕೈಲಾಸಂ ಇಂಗ್ಲೆಂಡಿನಿಂದ ತಂದ ಗ್ರಾಮಾಫೋನ್ ಪ್ಲೇಟಿನಲ್ಲಿ ಹಾಡು ಕೇಳಿಸುತ್ತಿದ್ದರು. ಕಾರ್ಮಿಕರ ಹತ್ತಿರ ಹಾಡು ಹೇಳಿಸುತ್ತಿದ್ದರು. ಹಾರ್ಮೋನಿಯಂ ಬಾರಿಸುತ್ತಾ ಅವರೊಂದಿಗೆ ಭಜನೆ ಮಾಡುತ್ತಿದ್ದರು. ಪ್ರತಿಷ್ಟಿತ ಮನೆತನ, ಪ್ರತಿಷ್ಟಿತ ಹುದ್ದೆ ಇವು ಯಾವುದೂ ಅವರಿಗೆ ಕಾರ್ಮಿಕರೊಂದಿಗೆ ಒಟ್ಟು ಸೇರಿ ಹಾಡಲಿಕ್ಕೆ ಅಡ್ಡ ಬರಲಿಲ್ಲ.


ಅವರ ನೌಕರಿ ಹೆಚ್ಚು ಕಾಲ ನಡೆಯದೇ, ೧೯೧೯ರಲ್ಲಿ ಹೊರಬಂದರು. ಅಲ್ಲಿಂದ ಮುಂದೆ ಸಾಯುವವರೆಗೂ, ಅವರು ಯಾವುದೇ ನಿಯಮಿತ ಕೆಲಸ ಎಂದು ಮಾಡಿದಂತೆ ಕಾಣುವುದಿಲ್ಲ..ಇಂಗ್ಲೆಂಡಿನ ಓದು, ಒಳ್ಳೆಯ ಕೆಲಸ, ಶ್ರೀಮಂತಿಕೆ ಎಲ್ಲಾ ಇದ್ದ ಕೈಲಾಸಂ ಹಠಾತ್ತನೆ ಕೆಲಸ ಬಿಟ್ಟದ್ದು ಅವರ ಬಂಧುವರ್ಗದವರಿಗೆ ಅಘಾತವನ್ನುಂಟುಮಾಡಿತು. ಮಹಾರಾಜರಿಂದ ದೊರೆತ ಉದ್ಯೋಗವನ್ನು ಬಿಟ್ಟದ್ದಕ್ಕೆ ಬೇಸರಗೊಂಡ , ಶಿಸ್ತಿನ ಮನುಷ್ಯ ಪರಮಶಿವ ಅಯ್ಯರ್ ಮಗನನ್ನು ದೂರಮಾಡಿದರು. ಕೈಲಾಸಂ ಜೀವನದ ದಾರಿಯೇ ಸಂಪೂರ್ಣ ಬದಲಾಯಿತು


ಪಿ.ಕೋದಂಡರಾವ್, ಬಳ್ಳಾರಿ ರಾಘವ ಇತ್ಯಾದಿ ವಿದ್ಯಾವಂತರು ೧೯೦೯ರಲ್ಲಿ Amateur Dramatic Association (ADA) ಎಂಬ ನಾಟಕಮಂಡಳಿಯನ್ನು ಸ್ಥಾಪಿಸಿದ್ದರು. ತಾವು ಕೆಲಸದಲ್ಲಿದ್ದಾಗಲೇ ಕೈಲಾಸಂ ಈ ಮಂಡಳಿಯ ಸದಸ್ಯರಾಗಿ, ರಾಘವರು ಪ್ರದರ್ಶಿಸುತ್ತಿದ್ದ ತೆಲುಗು ನಾಟಕಗಳಲ್ಲಿ ಹಾಸ್ಯಪಾತ್ರಗಳನ್ನು ಮಾಡುತ್ತಿದ್ದರು. ಈ ADA ಮಂಡಳಿಯು ಕನ್ನಡ ನಾಟಕ ಸ್ಪರ್ಧೆಯೊಂದನ್ನು ಏರ್ಪಡಿಸಿತು. ಈಗಾಗಲೇ ಸ್ಕೌಟು ಮಕ್ಕಳಿಗಾಗಿ ಬರೆದಿಟ್ಟಿದ್ದ ನಾಟಕವನ್ನೇ , ಸ್ನೇಹಿತರ ಒತ್ತಡದಿಂದ ಪರಿಷ್ಕರಿಸಿ ಸ್ಪರ್ಧೆಗೆ ಕಳುಹಿಸಿದರು. ಅದಕ್ಕೇ ಬಹುಮಾನ ಬಂತು. ಅದೇ ಅವರ ಪ್ರಸಿದ್ಧ ಟೊಳ್ಳುಗಟ್ಟಿ ನಾಟಕ. ಈ ಬಹುಮಾನದಿಂದ ಕೈಲಾಸಂಗೆ ಪ್ರಸಿದ್ಧಿಯೂ ಬಂತು , ಅವರಿಗೆ ರಂಗಭೂಮಿಯ ಆಸಕ್ತಿಯೂ ಹೆಚ್ಚಿತು. ಕೆಲಸ ಬಿಟ್ಟ ಮೇಲೆ ನಾಟಕ ರಚನೆ, ವಿನೋದಾವಳಿಗಳ ಪ್ರದರ್ಶನ ಅವರ ವೃತ್ತಿಯಾಯಿತು. ಕರೆದ ಕಡೆ ಹೋಗಿ ವಿನೋದಾವಳಿ, ಹಾಸ್ಯಗೀತೆ, ಹಾಗೂ ಹಾಸ್ಯಾಭಿನಯಗಳಿಂದ ಜನರಿಗೆ ಮನರಂಜನೆ ನೀಡುವುದು ಅವರ ಕಾರ್ಯಕ್ರಮವಾಯಿತು. ಪೌರಾಣಿಕ , ಕಂಪನಿ ನಾಟಕಗಳ ಆ ಕಾಲದಲ್ಲಿ , ಸಾಮಾಜಿಕ ವಸ್ತುಗಳ, ಜನಸಾಮಾನ್ಯರ ಭಾಷೆಯನ್ನೇ ಆಡುತ್ತಿದ್ದ ಪಾತ್ರಗಳ , ಅವರ ನಾಟಕಗಳು ಬಹಳ ಜನಪ್ರಿಯವಾದವು.


ಎ.ವಿ.ವರದಾಚಾರ್ಯರ ಸ್ನೇಹದಿಂದ , ಅವರ ರತ್ನಾವಳಿ ನಾಟಕ ಕಂಪನಿಯನ್ನು, ವರದಾಚಾರ್ಯರು ಕಾಹಿಲೆ ಬಿದ್ದಾಗ , ಹಾಗೂ ಮುಂದೆ ತೀರಿಕೊಂಡ ಮೇಲೂ, ಕೈಲಾಸಂ ಸ್ವಲ್ಪಕಾಲ ನಡೆಸಿದ್ದುಂಟು. ಅವರ ಅಮ್ಮಾವ್ರ ಗಂಡ ನಾಟಕ ತಯಾರಾದದ್ದು ಈ ಕಾಲದಲ್ಲಿಯೇ.


೧೯೨೯ರಲ್ಲಿ ವಸಂತಸೇನಾ ಮೂಕಿ ಚಿತ್ರದಲ್ಲಿ ಶಕಾರನ ಪಾತ್ರಕ್ಕೆ ಕೈಲಾಸಂ ಆಯ್ಕೆಯಾದರು. ಒಂದು ರಾತ್ರಿ , ಅದರ ಚಿತ್ರೀಕರಣವನ್ನು ಮುಗಿಸಿಕೊಂಡು , ಗೆಳೆಯರೊಂದಿಗೆ ಬರುತ್ತಿದ್ದಾಗ , ಕಂಟೋನ್ಮೆಂಟಿನ ಮನೆಯೊಂದರಿಂದ ಕೇಳಿ ಬರುತ್ತಿದ್ದ Constantinople ಎಂಬ ಹಾಡಿನಿಂದ ಸ್ಪೂರ್ತಿಗೊಂಡ ಕೈಲಾಸಂ ಅದೇ ಕ್ಷಣದಲ್ಲಿ, ಅದೇ ಮಟ್ಟಿನಲ್ಲಿ ಕೋ-ಓಓಳೀಕೆ ರಂಗಾ ಹಾಡನ್ನು ರಚಿಸಿದರೆಂದು ಹೇಳುತ್ತಾರೆ.


ಕೈಲಾಸಂ ತಮ್ಮ ಬಹುತೇಕ ಕೃತಿಗಳನ್ನು ರಚಿಸಿದ್ದು ೧೯೧೯ರಿಂದ ೧೯೩೫ರ ಕಾಲಾವಧಿಯಲ್ಲಿ. ಟೊಳ್ಳುಗಟ್ಟಿ ಬರೆದ ಎರಡು ದಶಕದೊಳಗೆ ಅವರು ಕನ್ನಡ ನಾಡಿನ ಪ್ರಸಿದ್ಧ ನಾಟಕಕಾರರಾಗಿದ್ದರು.೧೯೪೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಲಾಸಂ ಕಾವ್ಯೋತ್ಸವ ನಡೆಸಿತು. ಅಲ್ಲಿನ ಭಾಷಣಗಳನ್ನು ಸಂಗ್ರಹಿಸಿ ಕನ್ನಡ ನುಡಿ ಪತ್ರಿಕೆ ಕೈಲಾಸಂ ಪತ್ರಿಕೆಯನ್ನು ಹೊರತಂದಿತು.


ಅನಿರ್ದಿಷ್ಟ ಜೀವನ ನಡೆಸುತ್ತಿದ್ದ ಕೈಲಾಸಂರವರಿಗೆ ತಮ್ಮ ವಿನೋದಾವಳಿಗಳಿಂದ ಬರುತ್ತಿದ್ದ ಆದಾಯ, ಆಹ್ವಾನಿಸಿದ ಜನ ನೀಡುತ್ತಿದ್ದ ಆತಿಥ್ಯ, ಸ್ನೇಹಿತರ ಆದರ ಇವೇ ಜೀವನಕ್ಕೆ ಆಧಾರವಾಗಿತ್ತು. ಮುಂದೆ ಅವರ ಪುಸ್ತಕದ ರಾಯಲ್ಟಿ ಸಂದಾಯವಾಗತೊಡಗಿತು. ಆದರೂ, ಕೈಲಾಸಂಗೆ ಹಣ ಮಾಡಬೇಕೆಂಬ ಪ್ರವೃತ್ತಿಯೇ ಇರಲಿಲ್ಲ.


ಕೈಲಾಸಂ ಮಾತಿನ ಮೋಡಿಗೆ, ಪ್ರತಿಭೆಗೆ ಮಾರುಹೋದ ಒಂದು ಗೆಳೆಯರ ಗುಂಪೇ ಸೃಷ್ಟಿಯಾಯಿತು. ಕೆ.ವಿಅಯ್ಯರ್, ಎಂ.ಶಿವರಾಂ (ರಾಶಿ), ಬಿ.ಎಸ್.ವೆಂಕಟರಾಮ್, ಬಿ.ಎಸ್ ರಾಮರಾವ್ ಇವರಲ್ಲಿ ಕೆಲವರು. ಅವರ ತಮಾಷೆಯ ಮಾತಷ್ಟೇ ಅಲ್ಲದೇ ಅವರ ಅಪಾರಜ್ಞಾನ, ವಾಕ್ಶಕ್ತಿ ಹಾಗು ಪ್ರತಿಭೆಯಿಂದ ಆಕರ್ಷಿತರಾದ ಅನೇಕರು ಅವರ ಸಹವಾಸದಲ್ಲಿ, ಅವರು ಹೇಳಿದ ನಾಟಕಗಳನ್ನು ಬರೆದುಕೊಳ್ಳುವುದರಲ್ಲಿ ಊಟ ನಿದ್ದೆ ಬಿಟ್ಟು ನಿರತರಾಗಿದ್ದರು.


ಅವರ ಪಾಂಡಿತ್ಯ ಬರಿಯ ನಾಟಕಕ್ಕೇ ಸೀಮಿತವಾಗದೆ, ಇತಿಹಾಸ, ಧರ್ಮಶಾಸ್ತ್ರ , ವೇದಾಂತ, ಸಂಗೀತ ಇತ್ಯಾದಿಗಳಿಗೂ ಹಬ್ಬಿತ್ತು. ಮಾತೃಭಾಷೆ ತಮಿಳು, ನೆಚ್ಚಿನ ಭಾಷೆ ಕನ್ನಡ, ಇಂಗ್ಲೀಷ್ ಅಲ್ಲದೇ, ಮಲಯಾಳಂ, ತೆಲುಗು, ಸಂಸ್ಕೃತ, ಉರ್ದು ಭಾಷೆಗಳಲ್ಲಿ ಯೂ ಅವರಿಗೆ ಪ್ರಭುತ್ವವಿತ್ತು.. ಹಾರ್ಮೋನಿಯಂ , ಬುಲ್ ಬುಲ್ ತರಂಗ್ ವಾದ್ಯಗಳನ್ನು ಬಾರಿಸುತ್ತಿದ್ದರು.


ಕೈಲಾಸಂ ಸ್ವತಃ ಪ್ರಸಿದ್ಧಿಯನ್ನಾಗಲೀ, ಪ್ರಚಾರವನ್ನಾಗಲೀ ಬಯಸಿದವರಲ್ಲ. ೧೯೪೫ರಲ್ಲಿ ಮದರಾಸು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿದಾಗ , ತನ್ನಂಥಾ ಸಾಮಾನ್ಯನಿಗೆ ಈ ಗೌರವ ಯಾಕೆ ಎಂದು ಕೇಳಿದ್ದರಂತೆ.


ಕೈಲಾಸಂ ಕೊನೆಯದಿನಗಳು ಸುಖದಾಯಕವಾಗಿರಲಿಲ್ಲ. ಮದರಾಸಿನಿಂದ ಅವರು ಮುಂಬಯಿಗೆ ಹೋದರು. ಅಲ್ಲಿದ್ದಾಗಲೇ ಅವರ ಆರೋಗ್ಯ ಬಹಳ ಕೆಟ್ಟಿತ್ತು. ಜೀವನದ ಬೇಗೆಯಿಂದ ನೊಂದ ಕೈಲಾಸಂ ಬುದ್ಧಿ ಭ್ರಮಣೆಯ ಹಂತಕ್ಕೆ ಬಂದಿದ್ದರು. ಅಲ್ಲಿಂದ ಸಹೃದಯಿಯಬ್ಬರ ನೆರವಿಂದ ಬೆಂಗಳೂರು ತಲುಪಿದ ಕೈಲಾಸಂ , ಅಲ್ಲಿಯೇ ೨೩ ನವೆಂಬರ್ ೧೯೪೬ರಂದು ಕೊನೆಯುಸಿರೆಳೆದರು. ಆಗ ಅವರಿಗೆ ೬೨ ವರ್ಷ.


ಕೃಪೆ:


೧. ಕೈಲಾಸಂ: ಬದುಕು-ಬರೆಹ, ಸಂ: ರಾಮೇಗೌಡ, ಪ್ರಧಾನ ಗುರುದತ್ತ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ ೧೯೮೫


೨. ಕೈಲಾಸಂ ಕೃತಿಗಳು , ಪ್ರಧಾನ ಸಂಪಾದಕ: ಡಾ. ಎಚ್. ತಿಪ್ಪೇರುದ್ರಸ್ವಾಮಿ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ೧೯೮೭


೩. ನಮ್ಮ ಕೈಲಾಸಂ- ನೆನಪಿನ ಸಂಪುಟ, ಸಂ: ಪ್ರೊ. ಚಿ.ಶ್ರೀನಿವಾಸರಾಜು, ಪ್ರಿಸಮ್ ಬುಕ್ಸ್, ೨೦೦೩