Monday, January 24, 2011

ಗಾಂಧಿ ಹತ್ಯೆ ನಡೆದ ದಿನ

ಶುಕ್ರವಾರ, ೩೦ನೆಯ ಜನವರಿ, ೧೯೪೮ರಂದು ದೆಹಲಿಯಲ್ಲಿ ಬೆಳಗಾಯಿತು. ರೈಲ್ವೇ ಸ್ಟೇಷನ್ನಿನ ಪ್ರವಾಸಿಗರ ತಂಗುಕೋಣೆ (Retiring Room)ನಲ್ಲಿದ್ದ ನಥೂರಾಮ್ ಗೋಡ್ಸೆ ಬೆಳಿಗ್ಯೆ ಎದ್ದು ತಯಾರಾಗುತ್ತಿದ್ದಂತೆ , ವಿಷ್ಣು ಕರ್ಕರೆ ಮತ್ತು ನಾರಾಯಣ ಆಪ್ಟೆ ಅವರ ರೂಮಿಗೆ ಬಂದರು. ಗೋಡ್ಸೆಗೆ ರಾತ್ರಿ ಚೆನ್ನಾಗಿ ನಿದ್ದೆ ಬಂದಿತ್ತು.

ಮೂವರೂ ಮೊದಲನೆಯ ಮಹಡಿಯಲ್ಲಿದ್ದ ರೆಸ್ಟೋರೆಂಟಿಗೆ ತಿಂಡಿಗೆ ಹೋದರು. ಆರ್ಡರು ಮಾಡುವುದರಲ್ಲಿದ್ದ ಅವರಿಗೆ, ವೈಟರ‍್ ದೊಡ್ಡ ಸಲಾಮು ಹಾಕಿ ಪರಿಚಯದ ನಗೆ ಬೀರಿ ಮರಾಠಿಯಲ್ಲಿ ಕೇಳಿದ “ ಸಾಹೇಬರೇ, ಊರಿಂದ ತುಂಬಾ ದೂರ ಬಂದಿದ್ದೀರಿ !”

ದೆಹಲಿಯಂಥಾ ಪರವೂರಿನಲ್ಲಿ, ಅದೂ ಈ ದಿನ, ತಮ್ಮನ್ನು ಯಾರೋ ಗುರುತಿಸಿದ್ದನ್ನು ನೋಡಿ ಗಾಬರಿಯಾದ ಅವರು ಆತನತ್ತ ನೋಡಿದರು. ಗೋಡ್ಸೆ ಹೇಳಿದರು “ನೀನೂ ಬಹಳ ದೂರ ಬಂದಿದ್ದಂತೆ ಕಾಣುತ್ತದೆ. ಕಳೆದ ಬಾರಿ ನೋಡಿದಾಗ ನೀನು ಪುಣೆಯ ರೈಲ್ವೇ ಸ್ಟೇಷನ್ನಿನ ರೆಸ್ಟೋರೆಂಟಿನಲ್ಲಿದ್ದೆ ಅಲ್ಲವೇ?”

“ಹೌದು. ನಿಮಗೆ ಅಲ್ಲಿ ಸುಮಾರು ಬಾರಿ ತಿಂಡಿ, ಕಾಫಿ ತಂದುಕೊಟ್ಟಿದ್ದೇನೆ. ಇಲ್ಲಿಗೆ ವರ್ಗ ಆಗಿ ಎರಡು ವಾರವಾಯಿತಷ್ಟೇ” ಎಂದ ಆತ.

ಆ ಕಾಲದಲ್ಲಿ ಬ್ರಾಂಡನ್ & ಕಂಪನಿ ಎಂಬ ಗುತ್ತಿಗೆದಾರ ಭಾರತದಾದ್ಯಂತ ರೈಲ್ವೇ ಸ್ಟೇಷನ್ನುಗಳ ಯೂರೋಪಿಯನ್ ಶೈಲಿಯ ರೆಸ್ಟೋರೆಂಟುಗಳನ್ನು ನಡೆಸುತ್ತಿದ್ದು , ನೌಕರರುಗಳ ವರ್ಗಾವಣೆ ಸಾಮಾನ್ಯವಾಗಿತ್ತು.

ಬೆಣ್ಣೆ ಟೋಸ್ಟ್, ಕಾಫಿ, ಚಹಾದ ಆರ್ಡರ‍್ ತೆಗೆದುಕೊಂಡು ಆತ ಹೊರಟುಹೋದ. ಆತ ಹೋದ ಮೇಲೆ ಗೋಡ್ಸೆ, ಎರಡೂ ಮಣಿಕಟ್ಟುಗಳನ್ನು ಒಟ್ಟಿಗೆ ತಂದು ಬೇಡಿ ಹಾಕಿಸಿಕೊಂಡಂತೆ ಅಭಿನಯಿಸಿ , ಈ ಕಾಕತಾಳೀಯತೆಗೆ ಸೋಜಿಗ ಪಡುತ್ತಾ ತಲೆ ಅಲ್ಲಾಡಿಸಿದರು.

ತಿಂಡಿ ತಿಂದು ಗೋಡ್ಸೆ ಕೋಣೆಗೆ ಮೂವರೂ ವಾಪಸಾದರು. ಗೋಡ್ಸೆ ಕೂತುಕೊಂಡು ಒಂದಾದ ಮೇಲೊಂದು ಮೂರು ಪತ್ರಗಳನ್ನು ಬರೆಯತೊಡಗಿದರೆ, ಇನ್ನಿಬ್ಬರು ಮಾತಿಲ್ಲದೆ ಅವರನ್ನೇ ನೋಡುತ್ತಾ ಕುಳಿತಿದ್ದರು. ಅವರಿಬ್ಬರಿಗೆ ಆಗಲೇ ಗೋಡ್ಸೆ ತಮ್ಮಿಂದ ದೂರ ಹೋದಂತೆ ಅನ್ನಿಸಿ, ತಮ್ಮ ಅಸಹಾಯಕತೆಗೆ ನಾಚಿಕೆಯಾಗತೊಡಗಿತು.

ಗೋಡ್ಸೆ ಪತ್ರ ಬರೆದು ಮುಗಿಸಿದರು. ಪ್ರತಿ ಪತ್ರದೊಂದಿಗೆ , ಹಿಂದಿನ ರಾತ್ರಿಯೇ ತೆಗೆಸಿದ್ದ ಗೋಡ್ಸೆಯ ಫೋಟೋ ಕೂಡಾ ಇಟ್ಟಿದ್ದರು.

ಆಮೇಲೆ ಮೂವರೂ ಕೂತು ಗೋಡ್ಸೆ ಪಿಸ್ತೂಲಿನ ಗುರಿ ಹಿಡಿಯಲು ಸುಲಭವಾಗುವಷ್ಟು ಗಾಂಧೀಜಿಯ ಸಮೀಪಕ್ಕೆ ಹೋಗುವ ಉಪಾಯಗಳ ಬಗ್ಯೆ ಚರ್ಚಿಸತೊಡಗಿದರು. ಗಾಂಧೀಜಿ ಉಳಿದುಕೊಂಡಿದ್ದ ಬಿರ್ಲಾ ಹೌಸಿನ ಬಂದೋಬಸ್ತಿನ ಸಿಬ್ಬಂದಿಯನ್ನು ದುಪ್ಪಟ್ಟು ಮಾಡಲಾಗಿದೆ; ಅನೇಕ ರಕ್ಷಣಾ ಸಿಬ್ಬಂದಿ ಮಫ್ತಿಯಲ್ಲಿ ಜನಸಾಮಾನ್ಯರ ಗುಂಪಿನಲ್ಲಿ ಒಂದಾಗಿ ಕಾವಲು ಮಾಡುತ್ತಿದ್ದಾರೆ ಎಂಬ ಸುದ್ದಿ ಅವರ ಕಿವಿಗೆ ಬಿದ್ದಿತ್ತು. ಈ ಮಫ್ತಿಯಲ್ಲಿರುವವರು ಪುಣೆಯಿಂದ ಕರೆಸಿದವರಾಗಿದ್ದರೆ , ಅವರು ಈ ಮೂವರನ್ನು ಗುರುತು ಹಿಡಿಯುವ ಸಂಭವವಿರಬಹುದು ಎಂಬ ಚಿಂತೆ ಅವರನ್ನು ಬಾಧಿಸುತ್ತಿತ್ತು.

ಆಪ್ಟೆಗೆ ಒಂದು ಉಪಾಯ ಹೊಳೆಯಿತು. ಗೋಡ್ಸೆ (ಆಗಿನಕಾಲದ) ಫೋಟೋಗ್ರಾಫರ‍್ ಥರಾ, ತಲೆಯ ಮೇಲೆ ಮುಸುಕು ಹಾಕಿಕೊಂಡು, ಕ್ಯಾಮೆರಾ ಮತ್ತು ಮೂರುಕಾಲಿನ ಪೀಠ ಹೊತ್ತು ಬಿರ್ಲಾ ಹೌಸಿನ ಪ್ರಾರ್ಥನಾ ಮೈದಾನಕ್ಕೆ ಪ್ರವೇಶ ದೊರಕಿಸಿಕೊಳ್ಳುವುದು. ಗೋಡ್ಸೆ ಅದನ್ನು ತಳ್ಳಿ ಹಾಕಿದರು. ಆಪ್ಟೆ ಇನ್ನೊಂದು ಉಪಾಯ ಸೂಚಿಸಿದರು. “ಬುರ್ಖಾ ಹಾಕಿಕೊಂಡು ಹೋದರೆ ಹೇಗೆ? ಹೇಗಿದ್ದರೂ ಗಾಂಧೀಜಿಯವರ ಪ್ರಾರ್ಥನೆಗೆ ಅನೇಕ ಹೆಂಗಸರು ಬುರ್ಖಾದಲ್ಲಿ ಹೋಗುತ್ತಾರೆ”.

“ಅಷ್ಟೇ ಅಲ್ಲ, ಅವರು ಮುಂದಿನ ಸಾಲಿನಲ್ಲಿಯೇ ಕೂರಬಹುದು” ಕರ್ಕರೆ ಸೇರಿಸಿದರು.

ಹೆಂಗಸರನ್ನು ಮುಂದಿನ ಸಾಲಿನಲ್ಲಿ ಕೂರಿಸುವುದು ಸತ್ಯವಾಗಿತ್ತು. ಮುಂದಿನ ಸಾಲು ಗಾಂಧಿಜಿ ಕೂತಲ್ಲಿಂದ ಬರಿಯ ಎಂಟು ಹತ್ತು ಅಡಿಗಳಷ್ಟು ಹತ್ತಿರದಲ್ಲಿದ್ದು, ಗೋಡ್ಸೆಗೆ ಗುರಿ ಹಿಡಿಯಲು ಅನುಕೂಲಕರವಾಗಿತ್ತು.

ಈ ವಿಚಾರ ಮೂವರಿಗೂ ಒಪ್ಪಿತವಾಯಿತು. ತಕ್ಷಣವೇ ಆಪ್ಟೆ ಮತ್ತು ಕರ್ಕರೆ ಬುರ್ಖಾ ಶೋಧಕ್ಕಾಗಿ ಹೊರಹೊರಟರು. ಚಾಂದನಿ ಚೌಕದ ಹತ್ತಿರ ಎರಡು ಮೂರು ಪರಿಚಯದ ಅಂಗಡಿಗಳಲ್ಲಿ ಬುರ್ಖಾ ಕೊಳ್ಳುವ ಬಗ್ಯೆ ವಿಚಾರಿಸಿದರು. ಆದರೆ ಅವರ ಅದೃಷ್ಟಕ್ಕೆ ಆ ಅಂಗಡಿಯವರು ಹಿಂದೂಗಳಾಗಿದ್ದು ಬುರ್ಖಾ ಅವರಲ್ಲಿರಲಿಲ್ಲ. ಆದರೆ ಗಿರಾಕಿಗಳ ಸಪ್ಪೆ ಮೋರೆ ನೋಡಿ ಕನಿಕರಪಟ್ಟು ಅರ್ಧ ಘಂಟೆಯಲ್ಲಿ ಎಲ್ಲಿಂದಲಾದರೂ ತರಿಸಿಕೊಡುವ ಭರವಸೆ ನೀಡಿದರು.

“ ಯಾವ ಸೈಜಿನದು ಬೇಕು”

“ಎತ್ತರದ ಹೆಂಗಸು, ತೀರಾ ದಪ್ಪವಿಲ್ಲ” ಕರ್ಕರೆಯಿಂದ ಉತ್ತರ ಬಂತು.

ಹೇಳಿದಂತೆ ಅರ್ಧ ಘಂಟೆಯಲ್ಲಿ ಬುರ್ಖಾ ಸಿಕ್ಕಿತು. ಐವತ್ತು ರೂಪಾಯಿ ತೆತ್ತು ಕೊಂಡು ಉತ್ಸಾಹದಿಂದ ರೂಮಿಗೆ ವಾಪಸಾದರು. ಗೋಡ್ಸೆ ಅದರೊಳಗೆ ತೂರಿ ನೋಡಿದರೆ , ಯಾವುದೇ ಸಾಧಾರಣ ಮುಸ್ಲಿಮ್ ಮಹಿಳೆಯಷ್ಟೇ ಸಹಜವಾಗಿ ಕಂಡಿತು. ಗೋಡ್ಸೆ ನಡೆಯುವಾಗ ಕಾಲು ತೊಡರುತ್ತಿತ್ತು, ಕೈಬೀಸುವುದಕ್ಕೆ ಅಡಚಣೆಯಾಗುತ್ತಿತ್ತು. ಬೇಸತ್ತ ಗೋಡ್ಸೆ ಅದನ್ನು ತೆಗೆದು ಹಾಸಿಗೆಯ ಮೇಲೆಸೆದು “ ಊಪಯೋಗವಿಲ್ಲ” ಎಂದು ನಿಟ್ಟುಸಿರಿಟ್ಟರು.

“ಅದಕ್ಕೆ ಎಷ್ಟು ಕೊಟ್ಟಿದ್ದೀವಿ ಗೊತ್ತಾ !” ಕರ್ಕರೆ ಗೊಣಗಿದರು.

“ಖರ್ಚಿನ ಬಗ್ಯೆ ಯೋಚನೆ ಮಾಡುವ ದಿನವೇ ಇದು!” ಗೋಡ್ಸೆ ಪ್ರತ್ಯುತ್ತರ ಕೊಟ್ಟರು.

ಮಾರುವೇಷದ ಪ್ರಶ್ನೆ ಬಗೆಹರಿಯಲಿಲ್ಲ. ಅದನ್ನು ಅಲ್ಲಿಗೇ ಬಿಟ್ಟು ಮೂರೂ ಜನ ಟ್ಯಾಕ್ಸಿ ಹಿಡಿದು ಬಿರ್ಲಾ ದೇವಸ್ಥಾನಕ್ಕೆ ಹೋಗಿ , ಅಲ್ಲಿಂದ ಅರ್ಧ ಮೈಲಿ ನಡೆದು ಸಣ್ಣ ಕಾಡಿನ ಪ್ರದೇಶ ತಲುಪಿದರು. ಅಲ್ಲಿ , ಸಾಧಾರಣ ಮಾನವನ ಮುಂಡದಷ್ಟು ದಪ್ಪಗಿರುವ ಮರವೊಂದನ್ನು ಆರಿಸಿದರು. ಅದರ ಮೇಲೆ ತಲೆ, ಎದೆ ಮತ್ತು ಹೊಟ್ಟೆಯ ಗುರುತು ಮಾಡಿದರು. ಗೋಡ್ಸೆ ಸುಮಾರು ೨೦-೨೫ ಅಡಿ ದೂರದಿಂದ ಗುಂಡು ಹಾರಿಸತೊಡಗಿದರು. ಗುಂಡುಗಳು ಗುರಿ ಮುಟ್ಟಿದವು. ಮುಂದೆ ೧೫,೧೦,೫ ಅಡಿ ಹೀಗೆ , ಹತ್ತಿರ ಹತ್ತಿರದಿಂದ ಗುಂಡು ಹೊಡೆಯುತ್ತಾ ಬಂದರು. ಫಲಿತಾಂಶದಿಂದ ಗೋಡ್ಸೆಗೆ ಬೆರೆಟಾ ಪಿಸ್ತೂಲಿನ ಬಗ್ಯೆ ಸಮಾಧಾನವಾಯಿತು. ಅದರ ಭದ್ರತಾ ಕೊಂಡಿ (Safety Latch) ಹಾಕಿ, ಜೇಬಿನಲ್ಲಿ ಇಳಿಬಿಟ್ಟರು.

ಅಲ್ಲಿಂದ ವಾಪಸು ಬರುತ್ತಿದ್ದಂತೆ, ಮಾರುವೇಷದಲ್ಲಿ ಬಿರ್ಲಾ ಹೌಸಿಗೆ ಹೋಗುವುದರ ಯೋಚನೆ ತ್ಯಜಿಸಿದ್ದಾಗಿ ಗೋಡ್ಸೆ ಹೇಳಿದರು. ಅದರ ಬದಲು ಸೈನ್ಯದವರ ಸಮವಸ್ತ್ರವನ್ನು ಹೋಲುವ ಬಟ್ಟೆ ಹಾಕಿಕೊಳ್ಳುವುದಾಗಿ ನಿರ್ಧರಿಸಿದರು. ರಸ್ತೆ ಬದಿಯ ಅಂಗಡಿಯೊಂದರಲ್ಲಿ ಬೇಕಾದಂಥ ದಿರಿಸು ಸಿಕ್ಕಿತು. ಅಲ್ಲಿಂದ ಪಂಜಾಬಿ ಹೋಟೆಲೊಂದರಲ್ಲಿ ಊಟ ಮಾಡಿ ಕೋಣೆಗೆ ವಾಪಸಾದರು. ಗೋಡ್ಸೆ ಹೊಸ ದಿರಿಸು ಹಾಕಿಕೊಂಡು ನೋಡಿದರು. ಸರಿಯಾಗಿತ್ತು.

ಈಗಾಗಲೇ ಮಧ್ಯಾಹ್ನ ಒಂದು ಹೊಡೆದಿತ್ತು. ಅವರು ರೈಲ್ವೆಯ ತಂಗುಕೋಣೆ ಖಾಲಿ ಮಾಡಬೇಕಾದ ಸಮಯ ಬಂದಿತ್ತು. ಕರ್ಕರೆ ಮತ್ತು ಆಪ್ಟೆ ರೈಲ್ವೇ ಕೌಂಟರಿಗೆ ಹೋಗಿ, ತಾವು ಆ ಕೋಣೆಯಲ್ಲಿ ಇನ್ನೊಂದು ದಿನ ಇರಬಹುದೇ ಎಂದು ವಿಚಾರಿಸಿದರು. ಅಲ್ಲಿಯ ಗುಮಾಸ್ತ ನಿರಾಕರಿಸಿದ್ದಷ್ಟೇ ಅಲ್ಲ, ಅವರೊಂದಿಗೇ ಬಂದು, ರೂಮು ಖಾಲಿ ಮಾಡುವವರೆಗೂ ಕದಲಲಿಲ್ಲ. ಮೂವರೂ ಸಾಮಾನುಗಳನ್ನು ಹೊತ್ತುಕೊಂಡು, ಎರಡನೇ ದರ್ಜೆಯ ಕಾಯು ಕೋಣೆ (Waiting Room) ಗೆ ಬಂದರು. ಕಾಯುತ್ತಿದ್ದ ಪ್ರಯಾಣಿಕರ ಸಂಸಾರಗಳು, ಸಾಮಾನು ಹೊತ್ತು ಅಡ್ಡಾಡುತ್ತಿರುವ ಹಮಾಲಿಗಳು, ಕಿರಿಚಾಡುತ್ತಿರುವ ಮಕ್ಕಳು ಹೀಗೆ ಕಿಕ್ಕಿರಿದಿದ್ದ ಆ ರೂಮಿನಲ್ಲಿ ಒಂದು ಖಾಲಿ ಬೆಂಚು ಹುಡುಕಿದರು. ಗೋಡ್ಸೆ ಬೆಂಚಿನ ಮೇಲೆ ಕೂತರೆ, ಬಾಕಿ ಇಬ್ಬರು ಗೋಡ್ಸೆಯ ಸಣ್ಣ ಪುಟ್ಟ ಆಸೆಗಳನ್ನೂ ಪೂರೈಸಲು ಕಾತರರಾಗಿ, ಪಿಸುಮಾತಾಡುತ್ತಾ , ಅವರ ಪಕ್ಕದಲ್ಲಿ ನೆಲದ ಮೇಲೆ ಕೂತರು. ನಿಮಗೆ ಏನಾದರೂ ಬೇಕೇ? ಯಾವುದಾದರೂ ಆಸೆಯಿದೆಯೇ? ಮತ್ತೆ ಮತ್ತೆ ಗೋಡ್ಸೆಗೆ ಕೇಳಿದರು.

“ಹೌದು. ನನಗೀಗ ಹುರಿದ ಕಡಲೇಬೀಜ ತಿನ್ನಬೇಕು ಅಂತ ಆಸೆಯಾಗುತ್ತಿದೆ”

“ಈಗಲೇ ಹೋಗಿ ತರುತ್ತೇವೆ”

ಆಪ್ಟೆ ಮತ್ತು ಕರ್ಕರೆ ತಕ್ಷಣ ಎದ್ದು ನಿಂತು ಹೊರಟರು. ಹೊರಟದ್ದೇನೋ ಸರಿ, ಆದರೆ ಅಕ್ಕಪಕ್ಕದಲ್ಲಿ ಎಷ್ಟು ಹುಡುಕಿದರೂ ಹುರಿದ ಕಡಲೇಬೀಜ ಸಿಗಲಿಲ್ಲ. ಪೆಚ್ಚು ಮೋರೆ ಹಾಕಿಕೊಂಡು ವಾಪಸಾದ ಅವರನ್ನು ನೋಡಿ ಕಿರುನಗೆ ಬೀರಿದ ಗೋಡ್ಸೆ ಹೇಳಿದರು “ ಸಿಗಲಿಲ್ಲ ಅಲ್ಲವೇ. ನನಗೆ ಗೊತ್ತು. ಕಳೆದ ಬಾರಿ ಕೂಡಾ ನನಗೆ ಸಿಕ್ಕಿರಲಿಲ್ಲ”

ಮತ್ತೆ ಸ್ವಲ್ಪ ಹೊತ್ತು ಅಲ್ಲಿಯೇ ಕೂತಿದ್ದರು, ಮರಣಶಯ್ಯೆಯಲ್ಲಿರುವವನ ಅಕ್ಕಪಕ್ಕದಲ್ಲಿ ಕುಳಿತ ಕುಟುಂಬದವರಂತೆ.

ಆಪ್ಟೆ ಸಟಕ್ಕನೆ ಎದ್ದು ಕರ್ಕರೆಯನ್ನು ಕರೆದರು.

“ಇನ್ನೊಂದು ಘಂಟೆಯಲ್ಲಿ ಬರುತ್ತೇವೆ”. ಗೋಡ್ಸೆ ಸಣ್ಣಗೆ ನಕ್ಕರೂ ಎಲ್ಲಿಗೆ ಹೋಗುತ್ತೀರಿ ಎಂದು ಕೇಳಲಿಲ್ಲ.

ಅವರಿಬ್ಬರೂ ಟ್ಯಾಕ್ಸಿ ಹಿಡಿದು, ಅಕ್ಬರ‍್ ರಸ್ತೆ ಅಲ್ಬುಕರ್ಕ್ ರಸ್ತೆಯ ಸಂಧಿಯಲ್ಲಿ ಇಳಿದರು. ಅಲ್ಲಿಂದ ಅಲ್ಬುಕರ್ಕ್ ರಸ್ತೆಯಗುಂಟ ನಡೆಯುತ್ತಾ ಔರಂಗಜೇಬ ರಸ್ತೆಯ ವರೆಗೆ ಹೋಗಿ , ವಾಪಸು ಬಂದರು. ಆ ನೆವದಲ್ಲಿ ಬಿರ್ಲಾ ಹೌಸಿನಲ್ಲಿಯ ಭದ್ರತಾ ವ್ಯವಸ್ಥೆಯನ್ನು ಚೆನ್ನಾಗಿ ಹತ್ತಿರದಿಂದ ನೋಡಿದರು. ಬಹಳಷ್ಟು ಪೋಲಿಸರೇನೋ ಇದ್ದರೂ, ಅವರೆಲ್ಲಾ ಉತ್ತರ ಭಾರತೀಯರಂತೆಯೇ ಕಂಡರು. ಸಮಾಧಾನದಿಂದ ವಾಪಸು ಟ್ಯಾಕ್ಸಿಯಲ್ಲಿ ಹೊರಟು. ಇಂಡಿಯಾ ಗೇಟು ಹತ್ತಿರ ಹಾದುಹೋಗುತ್ತಿದ್ದರು.

“ನಿಲ್ಲಿಸು, ನಿಲ್ಲಿಸು” ಗಡಿಬಿಡಿಯಲ್ಲಿ ಕರ್ಕರೆ ಕೂಗಿದರು.

“ಏನಾಯಿತು?” ಆಪ್ಟೆ ಗಾಬರಿಯಾದರು.

“ಅಲ್ಲಿ ನೋಡು” ಕರ್ಕರೆ ಬೆರಳು ತೋರಿಸಿದರು. ಇಂಡಿಯಾ ಗೇಟಿನ ಹತ್ತಿರ ತಿನಿಸುಗಳನ್ನು ಮಾರುತ್ತಿದ್ದ ಅನೇಕ ಕೈಗಾಡಿಗಳಲ್ಲಿ ಒಂದರಲ್ಲಿ ಹುರಿದ ಕಡಲೇಬೀಜ ಇತ್ತು!

ಅವರು ವಾಪಸು ಬಂದಾಗ ದೆಹಲಿ ಸ್ಟೇಷನ್ನಿನ ದೊಡ್ಡ ಗಡಿಯಾರ ಮೂರು ತೋರಿಸುತ್ತಿತ್ತು. ಪೊಟ್ಟಣದಲ್ಲಿ ಕಡಲೇಬೀಜ ನೋಡಿದ ಗೋಡ್ಸೆಯ ಮುಖ ಅರಳಿತು.

“ ಏನು , ಪುಣೆಯವೆರೆಗೆ ಹೋಗಿ ತಂದಿರಾ!” ಆಶ್ಚರ್ಯದಿಂದ ಕೇಳಿದರು.

ಮೂವರೂ ಕಡಲೇಬೀಜ ಮೆಲ್ಲುತ್ತಿದ್ದಂತೆ, ಆಪ್ಟೆ ತಮ್ಮ ಭೇಟಿಯ ಉದ್ದೇಶ, ಬಿರ್ಲಾ ಹೌಸಿನಲ್ಲಿ ಪೋಲೀಸರು ಹೆಚ್ಚಿದ್ದರೂ, ಅವರೆಲ್ಲಾ ಸ್ಥಳೀಯರಂತೆ ಕಂಡದ್ದನ್ನು ಹೇಳಿದರು.

ಹೊರಡಲಿಕ್ಕೆ ಇನ್ನೂ ಒಂದು ತಾಸು ಬಾಕಿ ಇತ್ತು. ಇದ್ದಕ್ಕಿದ್ದಂತೆ ಮಾತಾಡುವುದೆಲ್ಲಾ ಮುಗಿದು ಮೌನ ಆವರಿಸಿತು. ಪ್ರತಿ ಬಾರಿ ಕರ್ಕರೆ ಏನಾದರು ಹೇಳಲು ಹೊರಟರೂ, ಗಂಟಲು ಗದ್ಗದವಾಗಿ ಮಾತೇ ಹೊರಡುತ್ತಿರಲಿಲ್ಲ.

ಅಂತೂ ಹೇಗೋ ವೇಳೆ ಸರಿಯಿತು. ಗೋಡ್ಸೆ ವಾಚಿನತ್ತ ನೋಡಿದರು. ನಾಲ್ಕೂ ಕಾಲು ತೋರಿಸುತ್ತಿತ್ತು.

“ ಸರಿ. ಇನ್ನು ಹೊರಡಬೇಕು. ನಾನು ಬರೆದ ಪತ್ರಗಳನ್ನು ಟಪ್ಪಾಲಿಗೆ ಹಾಕಿದ್ದೇನೆ”

“ನಾವೂ ನಿಮ್ಮೊಂದಿಗೆ ಬರೋಣವೇ?” ಆಪ್ಟೆ ಕೇಳಿದರು.

“ಯಾಕಿಲ್ಲ. ಅದೂ ಇಷ್ಟು ದೂರ ಬಂದಮೇಲೆ” ಗೋಡ್ಸೆ , ಜೇಬು ತಡವಿಕೊಂಡು ಪಿಸ್ತೂಲ್ ಇದೆ ಎಂದು ಖಾತ್ರಿ ಮಾಡಿಕೊಳ್ಳುತ್ತಾ ಉತ್ತರಿಸಿದರು. ಆಮೇಲೆ ಗೋಡ್ಸೆ ಒಬ್ಬರೇ ಹೊರಹೋದರು.

ಉಳಿದಿಬ್ಬರೂ ಹಾಗೇ ಕುಳಿತಿದ್ದರು. ಹತ್ತು ನಿಮಿಷವಾಯಿತು.

“ಚಲೋ” ಆಪ್ಟೆ ಎದ್ದು ನಿಂತರು.

ಇಬ್ಬರೂ ಹೊರಹೊರಟು ಟಾಂಗಾ ಹಿಡಿದರು., ಕರ್ಕರೆ ಇನ್ನು ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳತೊಡಗಿದರು.

“ಸಮಾಧಾನ ಮಾಡಿಕೊಳ್ಳಿ, ವಿಷ್ಣುಪಂತ. ಈ ಹಂತದಲ್ಲಿ ನಮ್ಮ ಯೋಜನೆ ಹಾಳಾಗಬೇಕು ಅಂತ ಇಚ್ಛೆಯೇ?” ಆಪ್ಟೆ ಸಮಾಧಾನಿಸಿದರು.

ಮಧ್ಯದಲ್ಲಿ ಟಾಂಗಾ ಮತ್ತೊಮ್ಮೆ ಬದಲಾಯಿಸಿ, ಬಿರ್ಲಾ ಹೌಸಿನಿಂದ ಸುಮಾರು ಇನ್ನೂರು ಗಜ ದೂರದಲ್ಲಿ ಇಳಿದು ನಡೆಯತೊಡಗಿದರು.

ಪೋಲಿಸರಿಗೆ ಈಗಾಗಲೇ ಗಾಂಧೀ ಹತ್ಯೆಯ ಷಡ್ಯಂತ್ರದ ಬಗ್ಯೆ ಸುಳಿವು ಸಿಕ್ಕಿತ್ತು. ಅದಕ್ಕಾಗಿ ಕೈಗೊಂಡ ಅನೇಕ ಕ್ರಮಗಳಲ್ಲಿ , ಪ್ರಾರ್ಥನೆಗೆ ಬರುವ ಪ್ರತಿಯೊಬ್ಬರನ್ನೂ ತಲಾಷ್ ಮಾಡುವ ಯೋಜನೆಯೂ ಇತ್ತು. ಇದನ್ನು ಕೇಳಿ ಗಾಂಧೀಜಿ ದಿಗ್ಭ್ರಮೆಗೊಂಡು “ ದೇವಸ್ಥಾನಕ್ಕೋ, ಚರ್ಚಿಗೋ, ಮಸೀದಿಗೋ ಹೋಗುವವರನ್ನು ಹೀಗೆ ತಲಾಷ್ ಮಾಡುತ್ತೀರಾ” ಎಂದು ಪ್ರತಿಭಟಿಸಿದರು. ಈ ಯೋಜನೆಯನ್ನು ಕೈಬಿಡಲಾಯಿತು.

ಅಂತೆಯೇ, ೩೦ ಜನವರಿಯ ಸಂಜೆ, ಮಿಲಿಟರಿ ಸಮವಸ್ತ್ರವನ್ನು ಹೋಲುವ ಬಟ್ಟೆ ತೊಟ್ಟ ವ್ಯಕ್ತಿಯೊಬ್ಬ ಬಿರ್ಲಾ ಹೌಸಿನ ಸರ್ವೀಸ್ ದ್ವಾರದ ಮೂಲಕ ಒಳಬಂದಾಗ ಆತನನ್ನು ಯಾರೂ ತಡೆದು ತಪಾಸಣೆ ಮಾಡಲಿಲ್ಲ. ಅಷ್ಟೇ ಅಲ್ಲ, ಅರ್ಧ ಘಂಟೆಯ ನಂತರ ಬೂದು ಬಣ್ಣದ ಶಾಲು ಹೊದ್ದ ಇನ್ನಿಬ್ಬರೂ ಸರಾಗವಾಗಿ ಒಳಬಂದರು.

ಇಂದು ಗಾಂಧೀಜಿಗೆ ಸಮಾಧಾನದ ದಿವಸವಾಗಿತ್ತು. ವಿಭಜನೆಯೊಂದಿಗೆ ಭಾರತ , ಪಾಕಿಸ್ತಾನಗಳಲ್ಲಿ ಶುರುವಾದ ನರಮೇಧದ ಭಾಗವಾಗಿ ದೆಹಲಿಯಲ್ಲಿಯೂ ನಡೆದಿದ್ದ ಮುಸ್ಲಿಮರ ಹತ್ಯೆ, ಗಾಂಧೀಜಿಯ ಉಪವಾಸದ ಕಾರಣ ತಹಬಂದಿಗೆ ಬಂದು ಶಾಂತಿ ನೆಲೆಸಿತ್ತು. ಇನ್ನು ಇತರ ಪ್ರದೇಶಗಳಿಗೆ ತೆರಳಿ ಅಲ್ಲಿಯೂ ಶಾಂತಿ ಸ್ಥಾಪಿಸುವ ವಿಚಾರ ನಡೆದಿತ್ತು.

ಆದರೆ ಅದಕ್ಕಿಂತ ಮೊದಲು ಇನ್ನೂ ಎರಡು ಮುಖ್ಯ ಸವಾಲುಗಳನ್ನು ಬಗೆಹರಿಸಬೇಕಾಗಿತ್ತು.

ಒಂದು ಪಕ್ಷಕ್ಕೆ ಸಂಬಂಧಿಸಿದ್ದು - ಈಗಾಗಲೇ ಪ್ರಕಟವಾಗಿದ್ದ ಕಾಂಗ್ರೆಸ್ಸಿಗರ ಅಧಿಕಾರ ದಾಹ. ಇದಕ್ಕುತ್ತರವಾಗಿ ಗಾಂಧಿ, ಕಾಂಗ್ರೆಸ್ಸಿನ ರಾಜಕೀಯ ಮುಖವನ್ನು ಸಂಪೂರ್ಣ ವಿಸರ್ಜಿಸಿ , ಅದನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶದ ಕರಡು ಸಂವಿಧಾನ ತಯಾರಿಸಿದ್ದರು.

ಇನ್ನೊಂದು ಸರಕಾರಕ್ಕೆ ಸಂಬಂಧಿಸಿದ್ದು - ನೆಹರೂ ಮತ್ತು ಪಟೇಲ್ ಇವರಿಬ್ಬರಲ್ಲಿ ಒಬ್ಬರನ್ನು ಸರಕಾರದ ಮುಖ್ಯಸ್ಥರನ್ನಾಗಿ ಆರಿಸುವುದು, ಇದು ಗಾಂಧೀಜಿಗೆ ಸುಲಭವಾದ ಕೆಲಸವಾಗಿರಲಿಲ್ಲ. ಇದನ್ನು ಬಗೆಹರಿಸುವ ಅಂಗವಾಗಿಯೇ, ಇಂದು ಮಧ್ಯಾಹ್ನ ಗಾಂಧೀಜಿ ಪಟೇಲರೊಂದಿಗೆ ಮಾತುಕತೆ ನಡೆಸಲಿದ್ದರು.

ಇಂದು ಗಾಂಧೀಜಿಯ ದಿನ ಎಂದಿನಂತೆ ಬೆಳಿಗ್ಯೆ ೩.೩೦ಗೆ ಏಳುವುದರಿಂದ ಶುರುವಾಗಿತ್ತು. ಪ್ರಾರ್ಥನೆ ಮುಗಿಸಿ, ತಮ್ಮ ಮೇಜಿನ ಮೇಲೆ ಮೂರು ಘಂಟೆ ಕೆಲಸ ಮಾಡಿ, ಮತ್ತೆ ಮಲಗಿದ್ದರು. ಎಂಟಕ್ಕೆ ಎದ್ದು ಪೇಪರುಗಳ ಮೇಲೆ ಕಣ್ಣಾಡಿಸಿ, ಸ್ನಾನ, ತಿಂಡಿ ಮುಗಿಸಿದ್ದರು, ಮತ್ತೊಂದು ಎರಡು ಘಂಟೆ ಕೆಲಸ ಮಾಡಿ , ಸಣ್ಣ ನಿದ್ರೆ ತೆಗೆದು, ಸುಮಾರು ಎರಡು ಘಂಟೆಯ ಹೊತ್ತಿಗೆ ಇಪ್ಪತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾಯುತ್ತಿದ್ದ ಜನರ - ನಿರಾಶ್ರಿತರು, ಪತ್ರಿಕಾ ಪ್ರತಿನಿಧಿಗಳು, ಅನುಯಾಯಿಗಳು, ಹಾಗೇ ಜೊತೆಯಲ್ಲಿ ಬಂದವರು ಇತ್ಯಾದಿ ಇತ್ಯಾದಿ, ಭೇಟಿಗೆ ತಯಾರಾಗಿದ್ದರು. ಬಂದವರಲ್ಲಿ ನುರಿತ ಸರಕಾರೀ ಅಧಿಕಾರಿಗಳೂ ಇದ್ದರು. ಸರಕಾರದ ಮಹತ್ವದ ನಿರ್ಧಾರಗಳಲ್ಲಿ ಅನೇಕವನ್ನು ಬಿರ್ಲಾ ಹೌಸಿನಲ್ಲಿಯೇ ತೆಗೆದುಕೊಳ್ಳಲಾಗುತ್ತಿತ್ತು.

ನಾಲ್ಕು ಘಂಟೆ ಸರದಾರ ಪಟೇಲ್ ತಮ್ಮ ಮಗಳೊಂದಿಗೆ ಆಗಮಿಸಿದರು. ಸುಮಾರು ಒಂದು ಘಂಟೆಯ ಮಾತುಕತೆಯಲ್ಲಿ ಹೆಚ್ಚೇನೂ ಪ್ರಗತಿಯಾಗಲಿಲ್ಲ.

ಘಂಟೆ ಐದಕ್ಕೆ ಕೆಲ ನಿಮಿಷಗಳಿದ್ದಾಗ, ಗಾಂಧೀಜಿಯವರ ಹದಿಹರೆಯದ ಸಂಗಾತಿಗಳು ಮನು, ಮತ್ತು ಅಭಾ ಕೋಣೆಯೊಳಕ್ಕೆ ಬಂದರು. ಗಾಂಧೀಜಿ ಗಡಿಯಾರ ನೋಡಿ , ತಮ್ಮ ಪ್ರಾರ್ಥನೆಯ ಸಮಯವಾಯಿತೆಂದು ಪಟೇಲರಿಗೆ ತಿಳಿಸಿ, ಐದೂ ಹತ್ತಕ್ಕೆ ಮನು, ಅಭಾರ ಹೆಗಲ ಮೇಲೆ ಕೈ ಊರಿ , ಪ್ರಾರ್ಥನೆಗೆಂದು ಹೊರಬಿದ್ದರು. ಅವರು ಬಿರುಸಿನಿಂದ ನಡೆಯುತ್ತಿದ್ದಂತೆ, ನೆರೆದಿದ್ದ ಜನಜಂಗುಳಿ ಅವರಿಗೆ ವಂದಿಸುತ್ತಿತ್ತು. ಗಾಂಧೀಜಿ ನಡೆಯುತ್ತಲೇ, ಪ್ರತಿವಂದಿಸುತ್ತಾ, ಹುಲ್ಲುಹಾಸಿನ ಮೈದಾನದಲ್ಲಿ ಸ್ವಲ್ಪ ಎತ್ತರದಲ್ಲಿದ್ದ ಕೂರುವ ಜಾಗಕ್ಕೆ ಮೆಟ್ಟಲು ಹತ್ತಿ ಸಾಗಿದರು.

ಅಂದು ಜನಜಂಗುಳಿ ಸುಮಾರು ಐನೂರರಷ್ಟಿತ್ತು. ಕರ್ಕರೆ ಮತ್ತು ಆಪ್ಟೆ ಜನರನ್ನು ಹಿಂದೆ ಸರಿಸಿ, ಗೋಡ್ಸೆಯ ಅಕ್ಕಪಕ್ಕದಲ್ಲಿ ಬಂದು ನಿಂತಿದ್ದರು. ಅವರನ್ನು ನೋಡಿದರೂ ಗೋಡ್ಸೆ ಪರಿಚಿತರೆಂದು ತೋರಿಸಿಕೊಳ್ಳಲಿಲ್ಲ. ಅಷ್ಟರಲ್ಲಿ ಜನರಲ್ಲಿ ಸಂಚಲನೆ ಉಂಟಾಯಿತು. ಗಾಂಧೀಜಿ ಬರುತ್ತಿದ್ದರು.

ಗಾಂಧೀಜಿ ಜನರಿಗೆ ವಂದಿಸಲು ಕೈಎತ್ತುತ್ತಿದ್ದಂತೆ, ಗೋಡ್ಸೆ ಪಿಸ್ತೂಲಿನ ಭದ್ರತಾ ಕೊಂಡಿಯನ್ನು ಜೇಬಿನಲ್ಲಿದ್ದಂತೆಯೇ ಕಳಚಿ, ಮುಂದೆ ಬಂದರು.

ಪಿಸ್ತೂಲು ಬಲಗೈಯಲ್ಲಿದ್ದಂತೆಯೇ, ಎರಡೂ ಕೈ ಮುಗಿದು ಗಾಂಧೀಜಿಗೆ ನಮಸ್ಕರಿಸಿದ ಗೋಡ್ಸೆ, ಎಡಗೈಯಿಂದ ಗಾಂಧೀಜಿಯ ಪಕ್ಕದ್ದಲ್ಲಿದ್ದ ಹುಡುಗಿಯನ್ನು ಸರಿಸುತ್ತಾ, ಗುಂಡು ಹಾರಿಸಿದರು. ಗಾಂಧೀಜಿ ತಕ್ಷಣ ಉಸಿರೆಳೆದುಕೊಂಡು, “ಆ.....ಹ್” ಎಂಬ ಉದ್ಗಾರದೊಂದಿಗೆ ಕುಸಿದರು. ಪಿಸ್ತೂಲ್ ಕೈಯಲ್ಲಿದ್ದಂತೆಯೇ ಕೈಮೇಲೆತ್ತಿ ಹಿಡಿದ ಗೋಡ್ಸೆ “ಪೋಲೀಸ್... ಪೋಲೀಸ್” ಎಂದು ಕೂಗಿದರು. ಇದು ಪೂರ್ವನಿಯೋಜಿತ ಹತ್ಯೆ ಎಂದು ಜನರಿಗೆ ತಿಳಿಸಬೇಕಾಗಿತ್ತು. ಅವರಿಗೆ ಪಿಸ್ತೂಲಿನೊಂದಿಗೆ ಬಂಧನಕ್ಕೊಳಗಾಗಬೇಕಾಗಿತ್ತೇ ಹೊರತು ಓಡಿ ಹೋಗುವ ಇಚ್ಛೆ ಇರಲಿಲ್ಲ.

ಇದ್ದಕ್ಕಿದಂತೆ ಎಲ್ಲವೂ ಸ್ತಬ್ದವಾಯಿತು. ಸುಮಾರು ಅರ್ಧ ನಿಮಿಷ ಯಾರೂ ನಿಂತಲ್ಲಿಂದ ಕದಲಲಿಲ್ಲ. ನಂತರ ಜನರಗುಂಪಿನಿಂದ ವಾಯುಸೇನೆಯ ಸಮವಸ್ತ್ರದಲ್ಲಿದ್ದವರೊಬ್ಬರು ಬಂದು ಗೋಡ್ಸೆಯ ಮೇಲೆ ಹಾರಿ ಮಣಿಕಟ್ಟನ್ನು ಗಟ್ಟಿಯಾಗಿ ಹಿಡಿದರು. ಪಿಸ್ತೂಲು ಕೆಳಗೆ ಬಿತ್ತು. ನಿಶ್ಚಲವಾಗಿದ್ದ ಗಾಂಧೀಜಿಯವರ ಬೆತ್ತಲೆ ಎದೆಯಿಂದ ರಕ್ತ ಹರಿಯತೊಡಗಿತ್ತು.

ಗಾಂಧೀಜಿಯ ಹತ್ತಿರದಲ್ಲಿದ್ದ ಗುರುಬಚನ್ ಸಿಂಗ್ ಎಂಬ ಉದ್ಯಮಿ ಗಾಂಧೀಜಿ ಸಾಯುವಾಗ “ಹೇ ರಾಮಾ” ಎಂದು ಉದ್ಗರಿಸಿದರು ಎಂದು ಮುಂದೆ ನ್ಯಾಯಲಯದಲ್ಲಿ ಹೇಳಿದರೆ, ಗೋಡ್ಸೆಯ ಹತ್ತಿರದಲ್ಲಿದ್ದು ಗಾಂಧೀಜಿ ಗುಂಡಿಗೀಡಾದುದನ್ನು ಕಣ್ಣಾರೆ ನೋಡಿದ ಕರ್ಕರೆಯ ಪ್ರಕಾರ ಗಾಂಧೀಜಿ “ಆ.....ಹ್” ಎಂದಷ್ಟೇ ಉದ್ಗರಿಸಿದರು. ಇದರಲ್ಲಿ ಅವರವರ ನಂಬಿಕೆಗೆ , ಭಾವಕ್ಕೆ ತಕ್ಕಂತೆ ಅವರು ಕಲ್ಪಿಸಿಕೊಂಡಿರಬಹುದಾದ ಸಾಧ್ಯತೆಗಳಿವೆ. ಇವರಿಬ್ಬರ ಅಭಿಪ್ರಾಯಗಳೂ ಸತ್ಯವಾಗಿರಬಹುದಾದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಗಾಂಧೀಜಿ “ಹೇ ರಾಮಾ” ಎಂದು ಉದ್ಗರಿಸಿದ್ದರೂ ಅವರ ಆ ಅಘಾತದ ಕ್ಷಣದಲ್ಲಿ ಈ ಶಬ್ದಗಳು ಸ್ಪಷ್ಟವಾಗಿರದೇ “ಆ.....ಹ್” ಎಂದಂತೆ ಕರ್ಕರೆಗೆ ಕೇಳಿರಬಹುದು.

ಉಪಸಂಹಾರ: ಮುಂದೆ ನಡೆದ ಮೊಕದ್ದಮೆಯಲ್ಲಿ ನಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆಗೆ ಫಾಸಿ ಶಿಕ್ಷೆ ವಿಧಿಸಲಾಯಿತು. ಕರ್ಕರೆ ಸೇರಿದಂತೆ ಮೂವರಿಗೆ (ಮತ್ತಿಬ್ಬರು - ಮದನಲಾಲ್ ಪಾಹ್ವಾ ಮತ್ತು ನಥೂರಾಮರ ಸೋದರ ಗೋಪಾಲ ಗೋಡ್ಸೆ) ಜೀವಾವಧಿ ಶಿಕ್ಷೆಯಾಯಿತು.

ಆಧಾರ : The Men Who Killed Gandhi – A book by Mr. Manohar Malgonkar

No comments:

Post a Comment