Monday, January 24, 2011

ಫೌಂಟನ್ ಪೆನ್ನಿನಲ್ಲಿ ಬರೆಯುವ ಸೊಗಸು

ಅಂತೂ ಐದನೆಯ ತರಗತಿಗೆ ಪ್ರವೇಶಿಸಿದಾಗ ಪೆನ್ನಿನಲ್ಲಿ ಬರೆಯುವ ಅರ್ಹತೆ ಬಂದಿತು. ಆಗ ನಮ್ಮೂರಲ್ಲಿ ಮೋಹನ್ ಪೆನ್ನು ಅಂತ ಸಿಗುತ್ತಿತ್ತು. ನನ್ನ ತರಹ ಹೊಸದಾಗಿ ಪೆನ್ನು ಹಿಡಿದು ಬರೆಯುವವರ ಫೇವರಿಟ್ಟು. ಬೆಲೆ ೭೫ ಪೈಸೆ !!

ನನಗೂ ಒಂದು ಮೋಹನ್ ಪೆನ್ನು ಬಂತು. ಸಂಭ್ರಮವೋ ಸಂಭ್ರಮ. ಅಂಡೆಯಲ್ಲಿ ಶಾಯಿ ತುಂಬಿಸುವುದೇನು, ಆ ಪ್ರಯತ್ನದಲ್ಲಿ ಅರ್ಧಕ್ಕರ್ಧ ಕೆಳಗೆ ಚೆಲ್ಲುವುದೇನು, ಅದನ್ನೆಲ್ಲಾ ಬೇಗ ಬೇಗ ಬಳಿಯುವುದೇನು. ಅಷ್ಟೆಲ್ಲಾ ಕಷ್ಟಪಟ್ಟು ಶಾಯಿ ತುಂಬಿಸಿ, ಬರೆಯತೊಡಗಿದರೆ , ನಿಬ್ಬಿನಿಂದ ಶಾಯಿಯೇ ಹರಿಯಬಾರದೇ ! ಶಕ್ತಿಯೆಲ್ಲಾ ಬಿಟ್ಟು ಪೆನ್ನು ಕೊಡವಿದರೆ ಎದುರಿನ ಗೋಡೆಯ ಮೇಲೆಲ್ಲಾ ನೀಲಿ ಚಿತ್ತಾರ. ಪೆನ್ನಿನಿಂದ ನೀಲಿ ಬಣ್ಣದ ಕಾರಿಕೆ. ಕಾಗದದ ಮೇಲೆ ಇಂಕಿನ ಗೊಣ್ಣೆಗಳು. ಅದನ್ನು ಹೀರಿದ ಕಾಗದದ ಮೇಲೆ ನೀಲಿ ಬಣ್ಣ ನಿಧಾನವಾಗಿ ಅಗಲಗಲವಾಗುತ್ತಿದ್ದಂತೆ ಪ್ಯಾನಿಕ್ !

ಇನ್ನು ಇಂಕು ಒಸರುವುದು. ಅಂಡೆಯ ಬುಡ ಅದು ಹೇಗೆ ಒಡೆಯುತ್ತಿತ್ತೋ ಪರಮಾತ್ಮನೇ ಬಲ್ಲ. Hairline Fracture . ಕಣ್ಣಿಗೆ ಕಾಣುತ್ತಲೂ ಇರಲಿಲ್ಲ. ಜಂಭದಿಂದ ಜೇಬಿನಲ್ಲಿ ಪೆನ್ನು ಇಳಿಬಿಟ್ಟುಕೊಂಡು ಸ್ಕೂಲಿಗೆ ಹೋದರೆ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಚಂದ್ರ ಹಂತಹಂತವಾಗಿ ದೊಡ್ಡದಾದಂತೆ ಜೇಬಿನ ಮೇಲೆ ಕ್ರಮೇಣ ದೊಡ್ಡದಾಗುವ ನೀಲಿ ಚಂದ್ರ.

ಅಂಡೆಯಮೇಲೆ ನಿಬ್ಬಿನ ಭಾಗ ಜೋಡಿಸಲಿಕ್ಕೆ ಇರುವ ಥ್ರೆಡ್ಡುಗಳ ಮಧ್ಯದಿಂದ ಇಂಕಿನ ಹನಿಗಳು ನಿಧಾನವಾಗಿ ಜಿನುಗಿದರೆ , ಕೈ ತುಂಬಾ ಇಂಕು . ನೋಟು ಬುಕ್ಕಿನ ಮೇಲೆಲ್ಲಾ ಬೆರಳಿನ ಗುರುತುಗಳು. ಅದಕ್ಕೆ ವ್ಯಾಸಲೀನ್ ಹಚ್ಚಿದರೆ ಜಿನುಗುವುದು ನಿಲ್ಲುತ್ತದೆ ಅಂತ ಯಾರೋ ಐನ್ಸ್ಸ್ಟೈನ್ ಪತ್ತೆ ಮಾಡಿದ್ದರು. ಸರಿ ಥ್ರೆಡ್ ಇರುವ ಭಾಗಕ್ಕೆ ಚೆನ್ನಾಗಿ ವ್ಯಾಸಲೀನ್ ಬಳಿಯುವುದು. ಇದರ ಪರಿಣಾಮ ಕೈಯೆಲ್ಲಾ ವ್ಯಾಸಲೀನ್ ಜಿಡ್ಡು, ಪುಸ್ತಕದ ಮೇಲೆಲ್ಲಾ ಕಲೆ. ಯಕ್!

ಇಷ್ಟರ ನಡುವೆ ಕೈಜಾರಿ ಪೆನ್ನು ಕೆಳಗೆ ಬೀಳುವುದೇನು , ಅದರ ನಿಬ್ಬು ಒಂದರ್ಧ ಉತ್ತರ ದಿಕ್ಕು ಇನ್ನೊಂದರ್ಧ ದಕ್ಷಿಣ ದಿಕ್ಕು ಮಾಡಿ ಸೊಟ್ಟ ಮೂತಿ ಮಾಡುವುದೇನು.ಅಳು ಬರುವುದೊಂದು ಬಾಕಿ. ಸರಿ ಮತ್ತೆ ಅವನ್ನ ಒಂದೇ ನೇರಕ್ಕೆ ತರಲಿಕ್ಕೆ ಒತ್ತುವುದು , ಕುಟ್ಟುವುದು ಎಲ್ಲಾ ಮಾಡುವಾಗ , ಲಟಕ್ ಎಂಬ ಶಬ್ದ , ನಿಬ್ಬು ಮುರಿದಿದೆ. ಹೊಸಾ ನಿಬ್ಬಿಗೆ ನಾಕಾಣೆ ಎಲ್ಲಿಂದ ಹೊಂದಿಸುವುದು!

ಇದಾವುದೂ ಅನಾಹುತವಿಲ್ಲದೆ ಸುಸೂತ್ರವಾಗಿ ಶಾಲೆಯಲ್ಲಿ ಬರೆಯುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಶಾಯಿ ಫಿನಿಶ್ !. ಬೆಂಚಿನಲ್ಲಿ ಪಕ್ಕದ ನಾಗರಾಜನೋ, ಸುರೇಶನೋ, ಉಮೇಶನೋ ಇವರ್ಯಾರ ಹತ್ತಿರವಾದರೂ ಗೋಗರೆದು , ಎರಡು "ಹುಂಡು" ಇಂಕು ಕಡ ತೆಗೆದುಕೊಳ್ಳುವುದು. ವಾಪಸು ಕೊಡಬೇಕಾದದ್ದು ಕಡ್ಡಾಯ !.

ಆಗಾಗ ಕ್ಯಾಪು ಕಳೆಯುತ್ತಿದ್ದುದುಂಟು. ಕ್ಯಾಪು ಕಳೆಯಿತು ಅಂತ ಹೊಸಾ ಪೆನ್ನು ತಗೊಳ್ಳುವುದೇ? ಛೇ, ಛೇ . ಸುಮ್ಮನೆ ದುಡ್ಡು ದಂಡ. ಮತ್ಯಾವುದೋ ಮೂಲೆಗೆ ಬಿದ್ದ ಪೆನ್ನಿನ ಕ್ಯಾಪು ತೆಗೆದು ಹಾಕಿಕೊಂಡರಾಯಿತು. ಕೆಂಪು ಅಂಡೆ, ಹಸಿರು ಕ್ಯಾಪು !

ಮನೆಯಲ್ಲಿ ಬಾಟಲಿಯಲ್ಲಿದ್ದ ಶಾಯಿ ಖರ್ಚಾದರೆ, ಹೊಸ ಬಾಟಲಿ ತರುವುದಲ್ಲ. ಅದೇ ಬಾಟಲಿ refill ಮಾಡುವುದು. ಅಂಗಡಿಯವನ ಹತ್ತಿರ ಇದ್ದ ಸಾರಾಯಿ ಬಾಟಲಿ ಥರಾ ದೊಡ್ಡ ಇಂಕಿನ ಬಾಟಲಿಯಿಂದ ಮಾರ್ಕು ಮಾಡಿದ ಪ್ಲಾಸ್ಟಿಕ್ಕಿನ ಲೋಟಕ್ಕೆ ಬಗ್ಗಿಸಿ ನಮ್ಮ ಬಾಟಲಿ ತುಂಬಿಸಿಕೊಡುತ್ತಿದ್ದ. ದರ ಮೂವತ್ತೈದು ಪೈಸೆ. ಪೆನ್ನಿಗೆ ಮಾತ್ರಾ ಶಾಯಿ ತುಂಬಬೇಕೇ? ಅದೂ ಉಂಟು. ಬರೀ ಮೂರು ಪೈಸೆ !

ಶಾಯಿ ಚೆಲ್ಲಿದರೆ, ಕೈಗೆ ಹತ್ತಿದರೆ ಅದನ್ನು ತಲೆಗೆ ಹಚ್ಚಿಕೊಳ್ಳಬೇಕು ಅಂತ ನಿಯಮ. ಯಾರು ಮಾಡಿದ್ದೋ ಗೊತ್ತಿಲ್ಲ, ಆದರೆ ನಾವೆಲ್ಲಾ ನಿಷ್ಠೆಯಿಂದ ಪಾಲಿಸುತ್ತಿದ್ದೆವು. ಪೂರ್ಣಚಂದ್ರ ತೇಜಸ್ವಿ ಅಣ್ಣ (ತಮ್ಮ?) ಚೈತ್ರ ಚಿಕ್ಕಂದಿನಲ್ಲಿ ಹೀಗೆ ಕೆಂಪಿಂಕು ಚೆಲ್ಲಿ , ಅದನ್ನೆಲ್ಲಾ ಯಾರಿಗೂ ಹೇಳದೆ ತಲೆಗೆ ಬಳಿದುಕೊಂಡು, ಮಾರನೇ ದಿನ ಅವರಮ್ಮ ತಲೆಗೆ ಸ್ನಾನ ಮಾಡಿಸುವಾಗ , ತಲೆಯೆಲ್ಲಾ ಕೆಂಪಾಗಿ , ತಲೆಯಿಂದ ರಕ್ತ ಬರುತ್ತಿದೆ ಅಂತ ಅವರಮ್ಮ ಗಾಬರಿಯಾಗಿ, ಒಟ್ಟಿನಲ್ಲಿ ರಂಪ. "ಅಣ್ಣನ ನೆನಪು" ಓದಿ ನೋಡಿ.

ಇಷ್ಟೆಲ್ಲಾ ರಗಳೆಯ ನಡುವೆಯೂ , ಚೆನ್ನಾಗಿ ಬರೆಯುವ ಪೆನ್ನು ಅಂದರೆ ಅದರ ಆನಂದವೇ ಬೇರೆ. ಕರಕರ ಎನ್ನದೇ, ಬೆಣ್ಣೆಯಂತೆ ನಿಬ್ಬು ಕಾಗದದ ಮೇಲೆ ಓಡುತ್ತಾ ಅಕ್ಷರಗಳನ್ನು ಮೂಡಿಸುತ್ತಿದ್ದರೆ, ಅದೇ ಒಂದು ಥ್ರಿಲ್ಲು.

ಚೀನಾದಿಂದ ಬಂದ ಹೀರೋ ಪೆನ್ನು ಇಟ್ಟುಕೊಳ್ಳುವುದು ಆಗ ಒಂದು ದೊಡ್ಡಸ್ತಿಕೆಯ ವಿಷಯ. ಹುಡುಗರಿಗೆ ಅವರಪ್ಪ ಅಮ್ಮ "ನೋಡು, ಚೆನ್ನಾಗಿ ಓದಿ ಕ್ಲಾಸಿಗೆ ಫಸ್ಟು ಬಂದರೆ ಒಂದು ಹೀರೋ ಪೆನ್ನು ಕೊಡಿಸುತ್ತೀನಿ" ಅಂತ ಆಸೆ ತೋರಿಸುವರು.

ಹೀಗೇ ದೊಡ್ಡವರಾದೆವು. ಹೈಸ್ಕೂಲಿಗೆ ಬರುವಾಗ ಬಾಲ್ ಪೆನ್ ಅಡಿಯಿಟ್ಟಿತ್ತು. ಕಾಲೇಜಿಗೆ ಬರೋ ಹೊತ್ತಿಗೆ ಫೌಂಟನ್ ಪೆನ್ ಉಪಯೋಗ ವಿರಳವಾಗುತ್ತಾ ಹೋಗಿತ್ತು.ಕೆಲಸಕ್ಕೆ ಸೇರಿದಮೇಲಂತೂ ಬರೀ ಬಾಲ್ ಪೆನ್ನುಗಳದ್ದೇ ರಾಜ್ಯ.

ಮನೆಯಲ್ಲಿ ಫೋನಿನ ಪಕ್ಕದ ಪಿಂಗಾಣಿ ಲೋಟದಲ್ಲಿ ಸುಮಾರು ಒಂದು ಡಜನ್ ಬಾಲ್ ಪೆನ್ನುಗಳು. ಯಾರಾದರೂ ಫೋನಿನಲ್ಲಿ ಯಾವುದೋ ವಿಷಯ ಹೇಳುತ್ತಿದ್ದಾಗ ಬರೆದಿಟ್ಟುಕೊಳ್ಳೋಣ ಎಂದು ಪೆನ್ನು ತೆಗೆದರೆ, ಒಂದಾದರೂ ಬರೆಯಬಾರದೇ! ಇಂಕು ಮುಗಿದಿದೆ ಅಥವಾ ಒಣಗಿದೆ. ಅಥವಾ ಎಲ್ಲೋ ಏನೋ ಮುರಿದಿದೆ. ಒಟ್ಟಿನಲ್ಲಿ ಉಪಯೋಗಕ್ಕೆ ಇಲ್ಲ.

ಚೀನಾದಿಂದ ಬಂದ rubberised ಬಾಲ್ ಪೆನ್ನುಗಳು. ಇಪ್ಪತ್ತು ಪೆನ್ನಿಗೆ ಹೋಲ್ ಸೇಲ್ ದರ ಮೂವತ್ತು ರೂಪಾಯಿ. ಚೆನ್ನಾಗಿ ಬರೆಯುತ್ತದೆ. ಇಂಕು ಮುಗಿದಮೇಲೆ ಎಸೆದರಾಯಿತು. Use and Throw. ಈ ಸ್ಕೀಮು ಜಾರಿಗೆ ಬಂದ ಮೇಲೆ ಮನೆಯಲ್ಲಿ ತುಂಬಿದ್ದ ಕೆಲಸಕ್ಕೆ ಬಾರದ ಪೆನ್ನುಗಳು ಕಸದ ಬುಟ್ಟಿ ಸೇರಿದವು.

ಮಗನಿಗೆ ಶಾಲೆಯಲ್ಲಿ ಜೆಲ್ ಪೆನ್ನು. ಫೌಂಟನ್ ಪೆನ್ನಿನ ಎಫೆಕ್ಟ್, ಬಾಲ್ ಪೆನ್ನಿನ ಅನುಕೂಲತೆ.

ಇದ್ದಕ್ಕಿದ್ದಂತೆ ಎರಡು ವರ್ಷದ ಕೆಳಗೆ ಫೌಂಟನ್ ಪೆನ್ನು ಉಪಯೋಗಿಸಬೇಕು ಅಂತ ಹುಕಿ ಹುಟ್ಟಿತು. ಮಾರ್ಕೆಟ್ಟಿನಲ್ಲಿ ಹುಡುಕಿದರೆ, ಫೌಂಟನ್ ಪೆನ್ ಮಾರುವವರೇ ಕಮ್ಮಿ . ಸಿಕ್ಕದರೂ ಅಗ್ಗದ , ಮೋಹನ್ ಪೆನ್ನಿನ ಆಧುನಿಕ ವರ್ಷನ್ನುಗಳು. ಕೊನೆಗೆ ಹೀರೋ ಪೆನ್ನಿದೆಯಾ ಅಂತ ಕೇಳಿದೆ. ಇತ್ತು . ಖುಷಿಯಿಂದ ಕೊಂಡುಕೊಂಡು ಬಂದು , ಆಫೀಸಿಗೆ ಕೊಂಡೊಯ್ದರೆ , ಬರೆಯಲೇ ಬಾರದೇ? . ಮತ್ತೆ ಹಳೆಯ ಕಾಲದಂತೆ ಕೊಡವುವುದು, ಬರೆಯುವುದು, ಕೊಡವುದುದು, ಬರೆಯುವುದು. ಸ್ವಲ್ಪ ಕಾಲದಲ್ಲೇ ಬೇಜಾರು. ಹೇಳಿ ಕೇಳಿ ಚೀನಾದ ಮಾಲಲ್ಲವೇ. ಇನ್ನೇನು ನಿರೀಕ್ಷಿಸುವುದು ?

ಆಮೇಲೆ ಇನ್ನೊಮ್ಮೆ ಅಂಗಡಿಯಲ್ಲಿ ಕೇಳಿದಾಗ , ಪಾರ್ಕರ್‍ ಕಂಪನಿಯ ಅಮಿತಾಭ್ ಬಚ್ಚನ್ ಜಾಹಿರಾತಿನ, ಫೌಂಟನ್ ಪೆನ್ನು ಸಿಕ್ಕಿತು. ಬೆಲೆ ನೂರು ರೂಪಾಯಿ. ಆವಾಗಿನಿಂದ, ಅಂದರೆ ಸುಮಾರು ಒಂದು ವರ್ಷದಿಂದ ಅದನ್ನೇ ಉಪಯೋಗಿಸುತ್ತಿದ್ದೇನೆ. ಏನೂ ತೊಂದರೆಯಿಲ್ಲ.

ಆಗಿನಿಂದ ಬಾಲ್ ಪೆನ್ನು ಉಪಯೋಗಿಸುವುದು ನಿಂತೇ ಹೋಗಿದೆ. ಈಗ ಈ ಪೆನ್ನು ಅಂದರೆ ಎಷ್ಟು ಇಷ್ಟ ಅಂದರೆ, ಏನಾದರೂ ಬರೆಯಲಿಕ್ಕೆ ಇದೆಯಾ ಅಂತ ಹುಡುಕುತ್ತಿರುತ್ತೇನೆ !

..ಕರಕರ ಎನ್ನದೇ, ಬೆಣ್ಣೆಯಂತೆ ನಿಬ್ಬು ಕಾಗದದ ಮೇಲೆ ಓಡುತ್ತಾ ಅಕ್ಷರಗಳನ್ನು ಮೂಡಿಸುತ್ತಿದ್ದರೆ, ಕಲಾವಿದನಿಗೆ ರೇಖೆಗಳು ಮೂಡಿ ಚಿತ್ರ ಸ್ಪಷ್ಟವಾಗುತ್ತಿದಂತೆ ಆಗುವ ಸಂತೋಷವೇ ನನಗೂ ಆಗುತ್ತದೆ. ಆಹಾ ಏನು ಸೊಗಸು !!!

PS: ಫೌಂಟನ್ ಪೆನ್ನಿನ ಉಪಯೋಗ ವಾತಾವರಣಕ್ಕೂ ಒಳ್ಳೆಯದು. ಹೇಗೆ ಅಂದಿರಾ. ನಾನೀಗ Use and Throw ಸಂಸ್ಕೃತಿಯ ಬಾಲ್ ಪೆನ್ನುಗಳ ಉಪಯೋಗ ಬಿಟ್ಟೇ ಬಿಟ್ಟಿದ್ದೇನೆ. Use ಇಲ್ಲ, Throw ಇಲ್ಲ.!!!!

ನೀವೇನಂತೀರಿ?

No comments:

Post a Comment