Tuesday, March 1, 2011

ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ


ಪಾಚಿ ಕಟ್ಟಿದ ಪಾಗಾರ:

ಕಾದಂಬರಿ

ಮಿತ್ರಾ ವೆಂಕಟ್ರಾಜ

ಮನೋಹರ ಗ್ರಂಥಮಾಲಾ,ಧಾರವಾಡ

ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು. ಕುಂದಾಪುರ ಸೀಮೆಯಲ್ಲಿನ ಬ್ರಾಹ್ಮಣ ಸಮುದಾಯದ ಸಾಮಾಜಿಕ ಸಂದರ್ಭದ ಹಿನ್ನೆಲೆಯಲ್ಲಿ ನಡೆಯುವ ಈ ಕಾದಂಬರಿಯ ಕೇಂದ್ರ ಬಿಂದುಗಳು ಪಾರ ಎಂಬ ಹೆಣ್ಣು ಮತ್ತು ಕೆಮ್ಮಾಡಿ ಮನೆ ಎಂಬ ಜಮೀನುದಾರಿ ಮನೆತನ. ಇವೆರಡರ ಕಥಾನಕಗಳೂ ಸಮಾನಾಂತರವಾಗಿ ಶುರುವಾದರೂ, ಮುಂದೆ ಒಂದುಗೂಡಿ ಮುಂದುವರಿಯುತ್ತದೆ.

ಜೀವನದಲ್ಲಿ ಸಂಭವಿಸುವ ಕಷ್ಟಕೋಟಲೆಗಳು , ಸುಖದುಃಖಗಳು, ಹುಟ್ಟುಸಾವುಗಳು ಇವುಗಳ ಜೊತೆಜೊತೆಯಾಗಿಯೇ ದೂರದ ಹೊರಜಗತ್ತಿನ ವಿದ್ಯಮಾನಗಳ ಹಾಗೂ ಅವುಗಳ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಭಾವ ಇವುಗಳನ್ನು ಪಾರ ಮತ್ತು ಕೆಮ್ಮಾಡಿ ಮನೆತನ ಎದುರಿಸುವ ,ಇವಕ್ಕೆ ಪ್ರತಿಕ್ರಿಯಿಸುವ, ಕೆಲವೊಮ್ಮೆ ಗೆಲ್ಲುವ, ಕೆಲವೊಮ್ಮೆ ಸೋಲುವ ಪ್ರಕ್ರಿಯೆಯೇ ಪಾಚಿ ಕಟ್ಟಿದ ಪಾಗಾರದ ಕಥಾವಸ್ತು. ಪಾರಳೆಂಬ ಕಿರುನಾವೆ ಮತ್ತು ಕೆಮ್ಮಾಡಿ ಮನೆಯೆಂಬ ಹಡಗು ಇವೆರಡೂ ಜೀವನವೆಂಬ ಸಾಗರದಲ್ಲಿ ಬಂದೊದಗುವ ಅಲ್ಲೋಲಕಲ್ಲೋಲಗಳನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತವೆ.

ಸಣ್ಣವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಪಾರಳನ್ನು ಹೊಟ್ಟೆಬಟ್ಟೆ ಕಟ್ಟಿ ಅವಳ ಬಡತಾಯಿ ಬೆಳೆಸುತ್ತಾಳೆ. ಹುಟ್ಟಿನಿಂದಲೇ ಕೈ ಹಿಡಿದ ಈ ಬಡತನ , ಕಷ್ಟಕೋಟಲೆಗಳು ಪಾರಳನ್ನು ಕಾದಂಬರಿಯುದ್ದಕ್ಕೂ ಕಾಡುತ್ತವೆ. ಕೆಮ್ಮಾಡಿ ಮನೆ ಹೊಕ್ಕ ಮೇಲೆ ಪಾರಳಿಗೆ ಸಿಗುವ ನೆಮ್ಮದಿ ಕೂಡಾ ಕೆಲ ಸಮಯದಲ್ಲಿಯೇ ಮತ್ತೆ ಭಗ್ನವಾಗುತ್ತದೆ.

ಕೆಮ್ಮಾಡಿ ಮನೆ ತಲೆತಲಾಂತರದಿಂದ ನಡೆದುಕೊಂಡು ಬಂದ ಆಢ್ಯ , ಶ್ರೀಮಂತ, ಜಮೀನುದಾರೀ ಕುಟುಂಬ. ಪಾರಳಿಗೆ ಹೊಟ್ಟೆಪಾಡೇ ಸವಾಲಾದರೆ ಕೆಮ್ಮಾಡಿ ಮನೆಗೆ ತಮ್ಮ ಜಮೀನು, ಆಳುಕಾಳುಗಳು, ಪೋಲೀಸು, ಕೋರ್ಟು-ಕಛೇರಿಗಳು, ಮನೆಯ ಬೃಹತ್ ವಹಿವಾಟುಗಳು ಇವುಗಳನ್ನು ನಿಭಾಯಿಸಿಕೊಂಡು ಹೋಗುವುದು ಸವಾಲು.

ಹೊರಜಗತ್ತು ಸಾಮಾಜಿಕವಾಗಿಯೂ, ರಾಜಕೀಯವಾಗಿಯೂ ಬದಲಾಗುತ್ತಿದೆ.ಆದರೆ ಸ್ವಾರಸ್ಯವೆಂದರೆ ಈ ಬದಲಾವಣೆಯ ಪ್ರಸ್ತಾಪ ಕಾದಂಬರಿಯಲ್ಲಿ ಆಗಾಗ ಬಂದರೂ , ಅದು ಹೀಗೆ ಬಂದು ಹಾಗೆ ಹೋಗುವ ತಂಗಾಳಿಯಂತೆ ಇದ್ದು , ಕಥೆಯ ಮುಖ್ಯ ವಾಹಿನಿಯಲ್ಲಿ ಸೇರುವುದಿಲ್ಲ. ನಾರಾಯಣ ಗುರುಗಳ ಬೋಧನೆಗಳು, ಶಾರದಾ ಆಕ್ಟ್, ಎರಡನೆಯ ಮಹಾಯುದ್ಧ, ಸ್ವಾತಂತ್ರ್ಯ ಹೋರಾಟ, ಭಾರತ ಸ್ವತಂತ್ರವಾದದ್ದು, ಕೇರಳದಲ್ಲಿ ಕಮ್ಯೂನಿಸಂ ಪ್ರವೇಶ ಈ ವಿದ್ಯಮಾನಗಳ ಪ್ರಸ್ತಾಪ ಬಹುತೇಕ ಆಗುವುದು ಯಾವುದೋ ಪಾತ್ರಗಳ ಹೇಳಿಕೆಗಳಲ್ಲಿ. ಕಥೆಯ ನಿರೂಪಣೆಯಲ್ಲಿಯೇ ಪ್ರಸ್ತಾಪ ಬಂದಾಗಲೂ ಕೂಡಾ, ಲೇಖಕಿ ಅದನ್ನು ವಿಸ್ತರಿಸುವುದಿಲ್ಲ. ಆದರೂ ಈ ಎಲ್ಲ ಹೊರ ಪ್ರಪಂಚದ ಆಗುಹೋಗುಗಳ ಪರಿಣಾಮ ಮಾತ್ರ ನೇರವಾಗಿ ಕಾಣುತ್ತದೆ. ಗೋವಿಂದ ಶಾಲೆಗೆ ಸೇರುವುದು ನಾರಾಯಣ ಗುರುಗಳ ಪರೋಕ್ಷ ಪ್ರೇರಣೆಯಿಂದ. ಕೃಷ್ಣದೇವರಾಯರು ಮಗಳ ಮದುವೆಯನ್ನು ಮುಂದೆ ಹಾಕುವುದು ಶಾರದಾ ಆಕ್ಟ್ ಬಂದೀತೆಂಬ ನಿರೀಕ್ಷೆಯಲ್ಲಿ. ಯುದ್ಧದಿಂದ ಸಾಮಾನುಗಳ ಬೆಲೆ ಹೆಚ್ಚಳ ಪಾರಳ ಜೀವನವನ್ನು ಇನ್ನಷ್ಟು ಕಂಗಾಲು ಮಾಡುತ್ತದೆ. ಗೋಪಾಲ ಹೈಸ್ಕೂಲು ಸ್ಥಾಪಿಸಲು ಪ್ರೇರಣೆ ಗಾಂಧಿವಾದ.

ಇವಕ್ಕೆ ಒಂದೇ ಒಂದು ಅಪವಾದ ಎಂದರೆ ಕೇರಳದಲ್ಲಿ ಶುರುವಾದ ಭೂಸುಧಾರಣೆ ಮತ್ತು ಉಳುವವನೇ ಭೂಮಿಗೊಡೆಯ ಚಳುವಳಿಗಳು.ಇದರ ಪ್ರಸ್ತಾಪ ಅಲ್ಲಲ್ಲಿ ಬಂದರೂ , ಪುಸ್ತಕದ ಮೊದಲ ಭಾಗದ ಕೊನೆಯಲ್ಲಿ ಇದ್ದಕ್ಕಿದ್ದಂತೆ ಅದು ಢಾಳಾಗಿ ಪ್ರಕಟವಾಗಿ , ಎರಡನೆಯ ಭಾಗದಲ್ಲಿ ಬರಬಹುದಾದ ಅನಿಷ್ಟದ ಸೂಚಕವಾಗುತ್ತದೆ. ಅದರಂತೆಯೇ ಮುಂದೆ ಈ ಚಳುವಳಿ ಒಂದು ಚಂಡಮಾರುತದ ರೂಪ ತಾಳಿ ಮಾಧವನನ್ನು ಪರೋಕ್ಷವಾಗಿ ಬಲಿ ತೆಗೆದುಕೊಂಡು, ಕೆಮ್ಮಾಡಿ ಮನೆಯ ಹಡಗನ್ನು ಒಡೆಯುತ್ತದೆ. ಇದರ ದುರಂತವೆಂದರೆ , ಇದಕ್ಕೆ ಸಂಬಂಧವೇ ಇರದ ಪಾಪದ ಪಾರಳ ಬದುಕೆಂಬ ನಾವೆ, ಈ ಚಳುವಳಿಯ ದೆಸೆಯಿಂದ ಅಲ್ಲೋಲಕಲ್ಲೋಲವಾಗುತ್ತದೆ. ಈ collateral damage ವಿಧಿಯ ಒಂದು ವಿಪರ್ಯಾಸ. ಕಾದಂಬರಿಯ ಕೊನೆಗೆ ಪಾರಳ ಮಕ್ಕಳು ಕೊನೆಗೂ ದಡಮುಟ್ಟಿದಂತೆ ಕಂಡರೂ, ಪಾರಳ ಮನಸ್ಸು ಮಾತ್ರ ಇನ್ನೂ ಅಭದ್ರವಾಗಿ ಹೊಯ್ದಾಡುತ್ತಿರುತ್ತದೆ.

ಕಾದಂಬರಿಗಳಲ್ಲಿ ಪಾತ್ರಗಳು ಮಾತಾಡುವಾಗ ಆಯಾ ಪ್ರಾದೇಶಿಕ ಭಾಷೆ ಬಳಸುವುದರಿಂದ ಕಾದಂಬರಿಯ authenticity ಹೆಚ್ಚಾಗುತ್ತದೆ, ಅದಕ್ಕೊಂದು ಆತ್ಮೀಯತೆ ಪ್ರಾಪ್ತವಾಗುತ್ತದೆ. ಆದರೆ ಇದರಲ್ಲಿಯ ಅಪಾಯ ಅಂದರೆ ಆಯಾ ಪ್ರದೇಶದ ಭಾಷೆಯ ಅರಿವಿಲ್ಲದ ಕನ್ನಡ ಓದುಗರಿಗೆ ಇದು ಅರ್ಥವಾಗದೆ ಹೇವರಿಕೆಯಾಗಬಹುದು, ಕಾದಂಬರಿಯ ರಸಾಸ್ವಾದನೆಗೆ ಭಂಗ ಬರಬಹುದು. ಆದ್ದರಿಂದ ಇದರಲ್ಲಿ ಒಂದು ಮಿತಿ ಮತ್ತು ಸಮತೋಲನ ಮುಖ್ಯ. ಲೇಖಕಿ ಈ ಪುಸ್ತಕದಲ್ಲಿ ಕುಂದಾಪುರದ ಪ್ರಾದೇಶಿಕ ಕನ್ನಡ ಭಾಷೆ, ಕೆಲವೊಮ್ಮೆ ತುಳು ಕೂಡಾ, ಬಳಸಿದ್ದರೂ, ಅದು ಕಥೆಯ ಓಟಕ್ಕೆ ಪೂರಕವಾಗಿದೆಯೇ ಹೊರತು ಮಾರಕವಾಗಿಲ್ಲ.

ಈ ಕಾದಂಬರಿಯಲ್ಲಿಯ ಅನೇಕ ಸಂಬಂಧಗಳಲ್ಲಿ ಒಂದಕ್ಕಿಂತ ಹೆಚ್ಚು ಆಯಾಮಗಳಿದ್ದು, ಸಂಕೀರ್ಣವಾಗಿವೆ. ಇದರ ಅನೇಕ ಉದಾಹರಣೆಗಳನ್ನು ನೋಡಬಹುದು. ಪಾರಳ ಅಮ್ಮ ಮೀನಾಕ್ಷಿ ಒಬ್ಬಳೇ ಮಗಳೆಂದು ಪಾರಳನ್ನು ಮುಚ್ಚಟೆಯಿಂದ ಸಾಕಿದರೂ, ಒಂದು ಮುದ್ದು ಮಾತಿನಿಂದ ಮಗಳನ್ನು ಕರೆದವಳಲ್ಲ. ನಲ್ಮೆಯ ನುಡಿಗಳಿಗಿಂತ ಬೈಗುಳಗಳು, ಪೆಟ್ಟು ಇವನ್ನು ತಿಂದದ್ದೇ ಹೆಚ್ಚು. ಹಾಗೆಂದು ಮಗಳು ಒಂದು ಗಳಿಗೆ ಕಣ್ಣಿಂದ ಮರೆಯಾದರೂ ಈ ಸುಟ್ಟವಳು ಎಲ್ಲಿ ಹೋದಳಪ್ಪ ಎಂಬ ಹುಡುಕಾಟ ಆತಂಕ ಶುರುವೇ.

ಮಾಧವ ಕೆಟ್ಟ ದಾರಿಗಿಳಿದು, ತಂದೆಯ ಮೇಲೆ ತಿರುಗಿಬೀಳುತ್ತಾನೆ. ಮನೆಯಲ್ಲಿಯೇ ಇದ್ದರೂ ತಂದೆಯ ಕಣ್ಣಿಗೆ ಬೀಳದೆ ಓಡಾಡುತ್ತಾನೆ. ಆದರೂ ಅದೇ ತಂದೆ , ಮರಣಶಯ್ಯೆಯಲ್ಲಿದ್ದಾಗ ಅವನಿಗೆ ಕಣ್ಣೀರು ಬರುತ್ತದೆ. ಆತ ತಂದೆಯ ಶುಶ್ರೂಷೆಗೆ ಧಡಪಡಿಸುತ್ತಾನೆ. ಮನೆ ನಡೆಸುವ ಪ್ರಕ್ರಿಯೆಯಲ್ಲಿ ಮೆಲ್ಲಗೆ ತೊಡಗುತ್ತಾನೆ.

ಇಂಥದ್ದೇ ಸಂಕೀರ್ಣತೆ ಮಾಧವ - ಸೀತಾರಾಮನ ಸಂಬಂಧದಲ್ಲಿಯೂ ಕಾಣುತ್ತದೆ. ಮಾಧವನಿಗೆ ಸೀತಾರಾಮ ತಮ್ಮನೆಂಬ ಸಹಜ ಮಮಕಾರವಂತೂ ಇದೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಇರುವುದರಿಂದ ಹಾಗೂ ಮಾಧವ ಮನೆಯ ಯಜಮಾನನೂ ಆಗಿರುವುದರಿಂದ , ಆತ ಸೀತಾರಾಮನತ್ತ ತಂದೆಯ ದೃಷ್ಟಿಯಿಂದಲೂ ನೋಡುತ್ತಾನೆ. ಆದರೆ ಇದರೊಂದಿಗೇ , ಸೀತಾರಾಮ ನಾಳೆ ಆಸ್ತಿಯಲ್ಲಿ ಪಾಲು ಬೇಡುವ ತನ್ನ ದಾಯವಾದಿ ಎನ್ನುವ ಲೌಕಿಕ ಪ್ರಜ್ಞೆಯೂ ಆತನಲ್ಲಿ ಜಾಗೃತವಾಗಿದೆ. ಮಾಧವ - ಅನಂತಯ್ಯನ ಸಂಬಂಧ ಸೋದರಮಾವ- ಸೋದರಳಿಯನದೋ, ಗೆಳೆತನದ್ದೋ ಅಥವಾ ಧಣಿ-ತೈನಾತಿಯದ್ದೋ? ಇವೆಲ್ಲ ಮುಖಗಳೂ ಅವರ ನಡವಳಿಕಗಳಲ್ಲಿ ಕಂಡುಬರುತ್ತವೆ.

ಕಾದಂಬರಿಯ ಸ್ತ್ರೀ-ಪುರುಷ ಪಾತ್ರಗಳಲ್ಲಿ ಒಂದು ಕುತೂಹಲಕಾರೀ ಭಿನ್ನತೆ ಕಾಣುತ್ತದೆ. ಇಲ್ಲಿಯ ಸ್ತ್ರೀ ಪಾತ್ರಗಳು ಗಟ್ಟಿಪಾತ್ರಗಳು. ಇವರು ಜೀವನವನ್ನು ಕೆಚ್ಚಿನಿಂದ ಎದುರಿಸುವವರು. ಎಷ್ಟೇ ಕಷ್ಟ ಬಂದರೂ ಹತಾಶೆಯಿಲ್ಲ. ಜೀವನ ವಿಮುಖತೆ ಇಲ್ಲ. ಗಂಡನನ್ನು ಕಳೆದುಕೊಂಡ ಪಾರಳಿಗೆ ತೌರಿನಲ್ಲಿಯೂ, ಗಂಡನ ಮನೆಯಲ್ಲಿಯೂ ಆಶ್ರಯ ಸಿಗದಾಗ, ನಾಲ್ಕು ಸಣ್ಣ ಮಕ್ಕಳನ್ನು ಕಟ್ಟಿಕೊಂಡ ಆಕೆ ತಕ್ಷಣವೇ ಕೆಲವು ಪಾತ್ರೆ ಮಾರಿ ಐದು ರೂಪಾಯಿ ಹೊಂದಿಸಿಕೊಳ್ಳುತ್ತಾಳೆ. ಎಂಟಾಣೆ ಬಾಡಿಗೆಗೆ ಯಾರದ್ದೋ ಕೊಟ್ಟಿಗೆಯ ಭಾಗವನ್ನು ತೆಗೆದುಕೊಂಡು, ಮಗನೊಡಗೂಡಿ ಮಣ್ಣಿನ ಗೋಡೆ ಕಟ್ಟಿಕೊಳ್ಳುತ್ತಾಳೆ. ಮುಂದೆ, ಮಕ್ಕಳನ್ನು ಸಾಕುವುದು ದುರ್ಭರವಾದಾಗ, ಮೂವರನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾಳೆ. ಈ ಯಾವ ಸಂದರ್ಭದಲ್ಲಿಯೂ ಆತ್ಮಹತ್ಯೆಯಂತಹ ಜೀವನ ವಿಮುಖ ಯೋಚನೆ ಅವಳ ಮನಸ್ಸಿನಲ್ಲಿ ಸುಳಿಯುವುದಿಲ್ಲ. ಈ ದೃಷ್ಟಿಯಿಂದ ಪಾರಳ ಜೀವನ ಮರಳಿ ಮಣ್ಣಿಗೆಯ ಪಾರೋತಿ ಮತ್ತು ಗೃಹಭಂಗದ ನಂಜಮ್ಮನನ್ನು ನೆನಪಿಗೆ ತರುತ್ತದೆ.

ಬಾಕಿ ಸ್ತ್ರೀ ಪಾತ್ರಗಳೂ ಹಾಗೆಯೇ. ಗಂಡ ಸತ್ತಾಗ ಸುಮಾರು ನಲವತ್ತು ಸಾವಿರ ರೂಪಾಯಿಯ (ಆ ಕಾಲದ) ಸಾಲ ಹೊತ್ತುಕೊಂಡ ಸೀತಮ್ಮ ಐದಾರುವರ್ಷದೊಳಗೆ ಸಾಲವನ್ನು ಸಂಪೂರ್ಣವಾಗಿ ತೀರಿಸಿ ಮನೆ ಉಳಿಸುತ್ತಾಳೆ. ಲಕ್ಶ್ಮೀದೇವಮ್ಮ ಒಂದರ ಹಿಂದೊಂದು ಮಕ್ಕಳನ್ನು ಕಳೆದುಕೊಂಡು ನೊಂದರೂ, ಮಾಧವನ ದರ್ಪದಿಂದ ಕಸಿವಿಸಿಗೊಂಡರೂ, ಕೆಮ್ಮಾಡಿ ಮನೆಯಲ್ಲಿ ಕಲ್ಲು ಕಂಭದಂತೆ ಸ್ಥಿರವಾಗಿ ನಿಂತು ಮುನ್ನಡೆಸುತ್ತಾಳೆ. ಮಾಧವನ ಅಂತಃಪ್ರಜ್ಞೆಯ ಕಾವಲು ಕಾಯುತ್ತಾಳೆ. ಮುಂದೆ ಮುದುಕಿಯಾಗಿ, ಬೆನ್ನು ಬಗ್ಗಿದ್ದರೂ, ಪಾರಳ ಮನೆಯ ಗೃಹಪ್ರವೇಶಕ್ಕೆ ಕಾರು ಮಾಡಿಕೊಂಡಾದರೂ ಹೋಗುವ ಜೀವನೋತ್ಸಾಹ ತೋರಿಸುತ್ತಾಳೆ. ಇದೇ ಪರಂಪರೆಯ ಮುಂದಿನ ಪೀಳಿಗೆಯ ಕಮಲಿ ಭೂಸುಧಾರಣೆಯಲ್ಲಿ ಬಹಳಷ್ಟು ಜಮೀನು ಹೋದರೂ, ಮನೆಯ ಯಜಮಾನಿಕೆ ವಹಿಸಿ ಸ್ವಂತ ಕೈಗಳಿಂದ ದುಡಿದು ಮನೆ ನಿಭಾಯಿಸುತ್ತಾಳೆ. ಇದಕ್ಕೆ ಅಪವಾದವಾದ ಶಂಕರಿ ಕೂಡಾ ತನ್ನ ಘನತೆ, ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸತ್ತರೂ ಗೌರವ ಉಳಿಸಿಕೊಳ್ಳುತ್ತಾಳೆ.

ಪುರುಷ ಪಾತ್ರಗಳಲ್ಲಿ ಇಂಥಾ ಗಟ್ಟಿತನ ಕಾಣುವುದಿಲ್ಲ. ಮಗ ಕೆಟ್ಟುಹೋದ ಎಂಬ ಕೊರಗಿನಲ್ಲಿ ಹಾಸಿಗೆ ಹಿಡಿದ ಕೃಷ್ಣದೇವರಾಯರು ಮೇಲೇಳುವುದೇ ಇಲ್ಲ. ಮಾಧವನ ದರ್ಪದ ಹಿಂದಿನ ಶಕ್ತಿ ಸ್ವಯಂಘಾತಕ ಪ್ರವೃತ್ತಿಯ ರಾಜಸವೇ ಹೊರತು ಸಾತ್ವಿಕವಲ್ಲ. ಸೀತಾರಾಮ ಚಿತ್ರ ಬರೆದುಕೊಂಡಿರುವ ಭಾವನಾ ಪ್ರಪಂಚದ ಮನುಷ್ಯ- ಇದರ ಬಗ್ಯೆ ಅವನ ಹೆಂಡತಿಗೇ ಬೇಸರವಿದೆ. ಅನಂತಯ್ಯನಂತೂ ಗಾಳಿ ಬಂದಾಗ ತೂರಿಕೊಳ್ಳುವವನು. ಗಾಂಧೀವಾದಿ ಸದಾನಂದ ಕೂಡಾ ಸ್ವತಂತ್ರ ಬಂದ ಮೇಲಿನ ವಿದ್ಯಮಾನಗಳಿಂದ ಹತಾಶನಾಗಿ ಅನಾಥಾಶ್ರಮ ಮುಚ್ಚುವ ನಿರ್ಧಾರ ಮಾಡುತ್ತಾನೆ. ಇದ್ದುದರಲ್ಲಿ ಗೋಪಾಲನೇ ಅಡ್ಡಿಯಿಲ್ಲವಾದರೂ ಆತನು ಬೇಗ ಸಾಯುವುದರಿಂದ ಆತನ ಪಾತ್ರ ಸೀಮಿತವಾಗಿದೆ.

ಚೊಚ್ಚಲ ಕಾದಂಬರಿಯಾದರೂ ಲೇಖಕಿ, ಭಾಷೆಯ ಬಳಕೆಯಲ್ಲಿ, ನಿರೂಪಣೆಯಲ್ಲಿ ತೋರಿಸಿರುವ ಸಂಯಮ ಮತ್ತು ಶಿಸ್ತು ಅಪರೂಪವಾದದ್ದು. ಶಂಕರಿಯ ಮತ್ತು ಮಾಧವನ ಸಾವು, ಲಚ್ಚನ ದುರಂತದಿಂದ ಪಾರನ ಮೇಲಾಗುವ ಪರಿಣಾಮ ಈ ರೀತಿಯ ಭಾವೋತ್ಕಟ ಘಟನೆಗಳನ್ನು ನಿರೂಪಿಸುವಾಗಲೂ ಅವರ ಭಾಷೆ ಹಿಡಿತ ತಪ್ಪುವುದಿಲ್ಲ. ನಿರೂಪಣೆ ಅಳತೆ ಮೀರುವುದಿಲ್ಲ. ಒಂದನೇ ಭಾಗಕ್ಕೂ , ಎರಡನೆಯ ಭಾಗಕ್ಕೂ ಬೇರೆಯೇ ಓಟವಿದೆ, ಧ್ವನಿಯಿದೆ. ಮೊದಲನೆಯ ಭಾಗದಲ್ಲಿ ವಸ್ತು ಸ್ಥಿತಿಯ ನಿರ್ಲಿಪ್ತ ನಿರೂಪಣೆಯಿದ್ದರೆ, ಎರಡರಲ್ಲಿ, ಮೊದಮೊದಲು ಅನಕೃ ಕಾದಂಬರಿಗಳಲ್ಲಿಯ ರಮ್ಯತೆಕಂಡರೂ ಬರಬರುತ್ತಾ ದುರಂತಮಯವಾದ ಚಿತ್ರಣ ಕಾಣುತ್ತದೆ.

ಒಟ್ಟಿನಲ್ಲಿ ಪಾಚಿ ಕಟ್ಟಿದ ಪಾಗಾರ ಈಚೆಗೆ ಬಂದಿರುವ ಕನ್ನಡ ಕಾದಂಬರಿಗಳಲ್ಲಿ, ನಾಲ್ಕು ಕಾಲ ನಿಲ್ಲುವಂತಹಾ ಪುಸ್ತಕ. ಏಳೆಂಟು ವರ್ಷಗಳ ಮಹತ್ವಾಕಾಂಕ್ಷಿ ಪ್ರಯತ್ನದ ಫಲವಾದ ಈ ಕೃತಿ ಓದುಗರಿಗೆ ಒಂದು ಒಳ್ಳೆಯ ಓದಿನ ಅನುಭವವನ್ನು ನೀಡುತ್ತದೆ.

No comments:

Post a Comment