Thursday, February 10, 2011

“ಕವಲು” ಓದಿದ ಮೇಲೆ ನನಗನ್ನಿಸಿದ್ದು

ನನ್ನ ಪೀಳಿಗೆಯ ಅನೇಕರ ಬಾಲ್ಯ ಕಾಲದ ಓದಿನ ಅವಿಭಾಜ್ಯ ಅನುಭವಗಳು ಎನ್.ನರಸಿಂಹಯ್ಯ, ತ್ರಿವೇಣಿ, ಎಂ.ಕೆ.ಇಂದಿರಾ, ಕಾರಂತರು ಹಾಗೇ ಭೈರಪ್ಪನವರ ಪುಸ್ತಕಗಳು. ನಾನೂ ಇದಕ್ಕೆ ಹೊರತಲ್ಲ. ಭೈರಪ್ಪನವರ ಸಾಧಾರಣ ಎಲ್ಲಾ ಕಾದಂಬರಿಗಳನ್ನೂ, ಈಚೆಗಿನ ಕೆಲವನ್ನು ಬಿಟ್ಟರೆ , ಓದಿ ಮುಗಿಸಿಯಾಗಿದೆ. ಓದಿದ್ದು ಬಹಳ ಹಿಂದೆ ಆದದ್ದರಿಂದ ಕೆಲವನ್ನು ಮರೆತೂ ಆಗಿದೆ. ಆದರೂ ಭೈರಪ್ಪನವರ ಕಾದಂಬರಿಗಳು ಎಂದರೆ ಒಂದು ಸಿದ್ಧ ವಿಶಿಷ್ಟತೆಯನ್ನು ನಿರೀಕ್ಷಿಸಬಹುದು ಎಂಬುದಂತೂ ಸತ್ಯ.

ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ ಕಾಣಬರುವ ಸಮಾನ ಅಂಶ ಅಂದರೆ ಭಾರತೀಯ ಸನಾತನ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಅವರ ಶ್ರದ್ಧೆ. ಈ ಶ್ರದ್ಧಾ ಮೂಲದ ತಾಕಲಾಟ ಅವರ ಅನೇಕ ಕಾದಂಬರಿಗಳಲ್ಲಿ ಮುಖ್ಯ ವಸ್ತುವಾಗಿ ಬರುತ್ತದೆ. ’ಧರ್ಮಶ್ರೀ’ಯಲ್ಲಿ ಮತಾಂತರದೊಂದಿಗೆ, ’ವಂಶವೃಕ್ಷ ’ದಲ್ಲಿ ವಿಧವಾ ವಿವಾಹ, ವಿವಾಹಬಾಹ್ಯ ಸಂಬಂಧಗಳೊಂದಿಗೆ, ’ತಬ್ಬಲಿಯು ನೀನಾದೆ ಮಗನೆ’ ಯಲ್ಲಿ ಪಶ್ಚಿಮ ಪ್ರೇರಿತ ಆಧುನಿಕತೆಯೊಂದಿಗೆ ಹೀಗೆ ಈ ತಾಕಲಾಟದ ವಿವಿಧ ಮಗ್ಗುಲುಗಳನ್ನು ಇವರ ಕಾದಂಬರಿಗಳು ವಿಶ್ಲೇಷಿಸುತ್ತವೆ. ’ಗೃಹಭಂಗ’ದ ಸಂಪೂರ್ಣ ಕಥಾವಸ್ತುವಿಗೆ ಇದೇ ಧಾರ್ಮಿಕ ತಳಹದಿಯಿದೆ. ಅದರಲ್ಲಿನ ಪಾತ್ರಗಳು ಯೋಚಿಸುವುದು, ಸರಿ-ತಪ್ಪುಗಳ ನಿರ್ಣಯ, ಸಂಕಟ ಸಮಯದಲ್ಲಿನ ನಿರ್ಧಾರಗಳು ಎಲ್ಲಾ ಈ ತಳಹದಿಯ ಮೇಲೆಯೇ ನಡೆಯುತ್ತದೆ. ’ಮತದಾನ’ ದಲ್ಲಿ ಕಥಾವಸ್ತು ಲೌಕಿಕವಾಗಿದ್ದರೂ ಗ್ರಹಣ, ಅದರಿಂದ ಬಸಿರಿನ ಮೇಲಿನ ಪರಿಣಾಮ ಇತ್ಯಾದಿಗಳ ಮೂಲಕ ಸನಾತನ ಪರಂಪರೆ ಹಾದು ಹೋಗುತ್ತದೆ.’ನಿರಾಕರಣ’ದಲ್ಲಿ ಕೂಡಾ ಬದುಕಿನಲ್ಲಿ, ಸಂಬಂಧಗಳಲ್ಲಿ ಅರ್ಥವನ್ನು ಶೋಧಿಸುವ ಪ್ರಯತ್ನ ಸನಾತನ ಧರ್ಮದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಇದೇ ಸರಪಳಿಯ ಮುಂದುವರಿದ ಭಾಗಗಳು ’ಆವರಣ’ ಮತ್ತು ಇತ್ತೀಚೆಗಿನ ’ಕವಲು’. ’ಆವರಣ’ ಮೊಘಲರ ಕಾಲದಲ್ಲಿ ಸನಾತನ ಧರ್ಮ ಪಾಲನೆಯ ಕಷ್ಟದ ಪರಿಸ್ಥಿತಿಯನ್ನು ಬಿಂಬಿಸಿದರೆ, ’ಕವಲು’ ನಮ್ಮ ಪಾರಂಪರಿಕ ಸಮಾಜ, ಕುಟುಂಬ ವ್ಯವಸ್ಥೆಯ ಮೇಲೆ, ಆಧುನಿಕ ಜಗತ್ತಿನ ಮಹತ್ವದ ಬದಲಾವಣೆಗಳಲ್ಲಿ ಒಂದಾದ ಸ್ತ್ರೀವಾದಿ ಅಂದೋಲನದ ಪರಿಣಾಮವನ್ನು ವಿಶ್ಲೇಷಿಸುತ್ತದೆ.

ಯಾವುದೇ ದಬ್ಬಾಳಿಕೆ, ಶೋಷಣೆ ನಿರಂತರವಾಗಿ ನಡೆಯಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದರ ವಿರುದ್ಧದ ದನಿ ಎದ್ದೇ ಏಳುತ್ತದೆ. ರಾಜಕೀಯ ಸ್ತರದಲ್ಲಿ ದೇಶಗಳು ತಮ್ಮನ್ನು ತಲೆತಲಾಂತರದಿಂದ ಆಳುತ್ತಿದ್ದ ವಿದೇಶೀಯರನ್ನು ಎತ್ತೊಗೆದಿದ್ದಾರೆ. ಬಿಳಿಯ-ಕರಿಯ ವರ್ಣಬೇಧ ನೀತಿ ಇಂದು ಇತಿಹಾಸ. ಹಾಗೆಯೇ ನಮ್ಮಲ್ಲೂ ದಲಿತರ ಜಾಗೃತಿ ಹಾಗೂ ಹೋರಾಟಗಳು ಇದಕ್ಕೆ ಉದಾಹರಣೆಗಳು.

ಇದೇ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಹೋರಾಟ ಅಂದರೆ ಸ್ತ್ರೀ ವಾದಿ ಅಂದೋಲನ. ಗಂಡಿನಷ್ಟೇ ಸಮರ್ಥವಾಗಿದ್ದರೂ, ಹೆಣ್ಣು ಎಂಬ ಏಕಮಾತ್ರ ಕಾರಣಕ್ಕೆ ಸಮಾಜದಲ್ಲಿ ನ್ಯಾಯವಾದ ಸ್ಥಾನ ಕೊಡದೇ , ಕ್ರಮೇಣ ಆಕೆಯನ್ನು ಅಡಿಗೆ ಮನೆಗೆ ಸೀಮಿತಗೊಳಿಸಿದ ಸಮಾಜವ್ಯವಸ್ಥೆಯ ವಿರುದ್ಧದ ಸ್ತ್ರೀ ವಾದೀ ಹೋರಾಟ ಈಗಾಗಲೇ ಅನೇಕ ದಶಕಗಳಷ್ಟು ಹಳೆಯದು. ಇದರ ಅನೇಕ ಒಳ್ಳೆಯ ಪರಿಣಾಮಗಳನ್ನು ನಾವು ನಮ್ಮ ಮನೆಗಳಲ್ಲಿ, ಕಛೇರಿಗಳಲ್ಲಿ, ರಸ್ತೆಗಳಲ್ಲಿ ಕಾಣುತ್ತಿದ್ದೇವೆ. ಸ್ತ್ರೀಪರ ಕಾನೂನುಗಳು, ಪಾಲಿಸಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸ್ತ್ರೀ ವಾದ ಸಾಕಷ್ಟು ಸಾಧಿಸಿದೆ.

ಆದರೆ ಯಾವುದೇ ಜಟಿಲ ಸಮಸ್ಯೆಗೆ ಅನೇಕ ಮಗ್ಗುಲುಗಳಿರುತ್ತವೆ. ಸ್ತ್ರೀ ವಾದವೂ ಇದಕ್ಕೆ ಹೊರತಲ್ಲ. ಸ್ತ್ರೀವಾದ ಹುಟ್ಟುವುದಕ್ಕೆ ಮೂಲ ಕಾರಣವಾದ ಹೆಣ್ಣು ಮಕ್ಕಳ ಶೋಷಣೆ, ಸಾಮಾಜಿಕ ಅಸಮಾನತೆಯ ಬಗ್ಯೆ ಎರಡು ಮಾತಿಲ್ಲದಿದ್ದರೂ, ಅದರ ಪರಿಹಾರಕ್ಕಾಗಿ ಸ್ತ್ರೀವಾದಿಗಳು ಹುಟ್ಟುಹಾಕಿರುವ ವಿಧಾನಗಳು , ಕಾನೂನುಗಳು ಇವುಗಳ ಬಗ್ಯೆ ಈಚೆಗೆ ಕ್ಷೀಣವಾಗಿಯಾದರೂ ಅಲ್ಲಲ್ಲಿ ಧ್ವನಿಗಳು ಕೇಳುತ್ತಿವೆ. ಕೇವಲ ಹೆಣ್ಣಿನ ದೂರಿನ ಆಧಾರದ ಮೇಲೆ ಮನೆಯವರನ್ನು ಜಾಮೀನಿಲ್ಲದೆ ಸೆರೆವಾಸಕ್ಕೆ ತಳ್ಳುವ ಕಲಮು 498A (Domestic Violence Act) ಇದರ ಒಂದು ಉದಾಹರಣೆ. ಇದು, ಹಾಗೂ ಇನ್ನಿತರ ಸ್ತ್ರೀಪರ ಕಾನೂನುಗಳು , ನೀತಿಗಳ ದುರುಪಯೋಗದ ಸಾಧ್ಯತೆಗಳ ಬಗ್ಯೆ ಚರ್ಚೆ ಅಲ್ಲಲ್ಲಿ ಶುರುವಾಗಿರುವುದರ ಹಿನ್ನೆಲೆಯಲ್ಲಿಯೇ ಭೈರಪ್ಪನವರ ಈ ಕಾದಂಬರಿ ಬಂದಿದೆ.

ಸ್ತ್ರೀ ವಾದದ ಅನಪೇಕ್ಷಿತ ಮಗ್ಗುಲು, ಅಂದರೆ, ಇದರಿಂದ ಸನಾತನ ಕುಟುಂಬ ವ್ಯವಸ್ಥೆಯ ಮೇಲಿನ ದುಷ್ಪರಿಣಾಮವನ್ನು ತೆರೆದಿಡುವುದು ಈ ಕಾದಂಬರಿಯ ಉದ್ದೇಶ. ಅದಕ್ಕನುಗುಣವಾಗಿ ವಿಧವಿಧ ಸನ್ನಿವೇಶಗಳನ್ನು, ಉಪಕಥೆಗಳನ್ನು ಪೋಣಿಸಿ ಕಾದಂಬರಿಯ ರೂಪದಲ್ಲಿ ಸಿದ್ಧಗೊಳಿಸಲಾಗಿದೆ. ಇಲ್ಲಿಯ ಮುಖ್ಯ ಹೆಣ್ಣು ಪಾತ್ರಗಳು ಕಪ್ಪು ಬಿಳುಪಿನವು. ಮಂಗಳೆ, ಇಳಾ , ಸರಾಫ್ ಮೇಡಂ, ಚಿತ್ರಾ ಹೊಸೂರ‍್, ಮಾಲಾ ಕೆರೂರ‍್ ಇತ್ಯಾದಿಗಳು (“ಬರೀ ಹಣೆ, ಬರೀ ಕಿವಿ, ಬಳೆ ಇಲ್ಲ, ಸಲ್ವಾರ‍್ಕಮೀಜ್, ಬಾಬ್ ಕಟ್ ತಲೆ, ವಿಧವೆಯೋ ಸೂತಕವೋ ಎಂಬಂಥ ಕಳೆ”) ಸ್ತ್ರೀ ವಾದಿ ಗುಂಪು ಇವರು “ಕಪ್ಪು” ಗುಂಪಿನವರು. ಇವರು ಓದಿದವರು; ತನ್ನ ಹಕ್ಕಿನ ಬಗ್ಯೆ ಚೆನ್ನಾಗಿ ಎಚ್ಚರವುಳ್ಳವರು; ಡೈವೋರ್ಸ್ ಬಗ್ಯೆ ಲಾಯರನ್ನು ಎಡತಾಕುವುದು ಇವರಿಗೆ ದೊಡ್ಡ ವಿಷಯವಲ್ಲ. ಗಂಡಸನ್ನು ಮೇಲ್ ಛಾವಿನಿಸ್ಟ್ ಪಿಗ್, ಲೋಫರ‍್, ಸ್ವಾರ್ಥಿ, ಚೀಟ್ ಎಂದು ತಿಳಿದುಕೊಂಡಿರುವವರು; ಗಂಡನನ್ನು ಬ್ಯಾ*ರ್ಡ್, ರ‍್ಯಾಸ್ಕಲ್ ಎಂದು ಬೈದುಕೊಳ್ಳುವವರು; ಕುಟುಂಬ ಎಂದರೆ ಗಂಡ, ಹೆಂಡತಿ, ಅವರ ಮಕ್ಕಳು ಮಾತ್ರಾ ಎಂದು ಪ್ರತಿಪಾದಿಸುವವರು. ಇನ್ನೊಂದೆಡೆ ವೈಜಯಂತಿ, ರಾಜಮ್ಮ, ಪಾರ್ವತಿ, ದ್ಯಾವಕ್ಕ ಇತ್ಯಾದಿಗಳು (“ದೊಡ್ಡ ಕುಂಕುಮ, ತುರುಬು, ಅದಕ್ಕೊಂದು ಹೂವಿನ ದಂಡೆ, ಕಿವಿಯ ಓಲೆ, ಮಾಂಗಲ್ಯ, ಸೀರೆ”) ಇವರುಗಳು “ಬಿಳಿಯ” ಗುಂಪು. ಇವರು ಸನಾತನ ಕುಟುಂಬ ವ್ಯವಸ್ಥೆಯ ಪ್ರತಿನಿಧಿಗಳು. ಇವರು ಹೊರಗಿನ ಕೆಲಸದ ಸಮಸಮವಾಗಿ ಮನೆಗೆಲಸ ಮಾಡುವರು, ಮಕ್ಕಳನ್ನು ಸಾಂಪ್ರದಾಯಿಕವಾಗಿ ಬೆಳೆಸುವವರು, ಕುಡುಕ ಗಂಡನೊಡನೆಯೂ ಹೊಂದಿಕೊಂಡು ಸಂಸಾರ ಮಾಡುವವರು. ಇವೆರಡು ಗುಂಪುಗಳ ಪ್ರತಿನಿಧಿಗಳು ಮುಖಾಮುಖಿಯಾಗುವ ಸನ್ನಿವೇಶಗಳು ಹೆಚ್ಚಿಲ್ಲದಿದ್ದರೂ, ಕಥಾನಕದಲ್ಲಿ ’ಬಿಳಿ’ ಗುಂಪಿನ ವ್ಯಕ್ತಿಗಳ ಸಂಗತಿಗಳು ಆಗಾಗ ಬಂದು ಮೊದಲ ಗುಂಪಿನವರ ಜೀವನ ಶೈಲಿಯ ವಿಮರ್ಶೆಗೆ ಒಂದು Frame Of Reference ತಂದುಕೊಡುತ್ತವೆ.

ಇಲ್ಲಿಯ ಮುಖ್ಯ ಗಂಡು ಪಾತ್ರಗಳು, ಜಯಕುಮಾರ ಮತ್ತು ವಿನಯ, ಸ್ತ್ರೀವಾದಿ ಹೆಂಡಂದಿರಿಂದ ಸತಾಯಿಸಲ್ಪಟ್ಟ ಬಲಿಪಶುಗಳು. ನಚಿಕೇತ ಅಮೆರಿಕಾದಲ್ಲಿ ಹೆಣ್ಣಿನಿಂದ ಮೋಸ ಹೋದವನು. ಇವರಿಗೆ ಡೈವೋರ್ಸ್ ಸಹಾ ಸುಲಭವಾಗಿ ಸಿಗುವುದಿಲ್ಲ. ಇವರು ಮಕ್ಕಳನ್ನು ತಾಯಂದಿರಿಗಿಂತ ಹೆಚ್ಚು ಮುಚ್ಚಟೆಯಿಂದ ಬೆಳೆಸುವವರು. ಸಮಾಜ ಸಾಧಾರಣವಾಗಿ ಮಾನ್ಯ ಮಾಡದ ವಿವಾಹ ಬಾಹ್ಯ ಸಂಬಂಧ, ಬೆಲೆವೆಣ್ಣುಗಳ ಸಂಪರ್ಕ ಇತ್ಯಾದಿಗಳನ್ನು ಜಯಕುಮಾರ ಮಾಡಿದರೂ, ಲೇಖಕರು ಅವನ್ನು ಸಹಾನುಭೂತಿಯಿಂದಲೇ ನೋಡುತ್ತಾರೆ.

ಸ್ತ್ರೀ ವಾದದ ಒಂದು ಮುಖ್ಯ ಅಂಶ ಲೈಂಗಿಕ ಸ್ವಾತಂರ್ತ್ಯ. ಅದರ ನಿದರ್ಶನಗಳು ಈ ಪುಸ್ತಕದಲ್ಲಿ ವಿಪುಲವಾಗಿವೆ. ವಿವಾಹಪೂರ್ವ, ವಿವಾಹೇತರ ಸಂಬಂಧಗಳು ಹೋಗಲಿ, ವಿಮೋಚನೆಯ ಅತ್ಯುಚ್ಚ ಮೆಟ್ಟಿಲು ಎಂದು ಸರಾಫ್ ಮೇಡಂ ಹೇಳುವ ಸಲಿಂಗ ಸಂಬಂಧ ಕೂಡಾ ಇದರಲ್ಲಿ ಕಾಣಬರುತ್ತವೆ. ಇದರ ಒಂದು ಗಂಡು ಪಾತ್ರ ಪ್ರಭಾಕರ ಕಾಲೇಜಿನಲ್ಲಿ ಸಹಪಾಠಿಯೊಂದಿಗೆ ಸಂಬಂಧ ಶುರುಮಾಡುವುದು ಕೂಡಾ ಸ್ತ್ರೀ ವಾದೀ ಮೇಡಮ್ಮನ ಪ್ರಭಾವೀ ಲೆಕ್ಚರು ಕೇಳಿಯೇ!

’ಆವರಣ’ ದಂತೆ ’ಕವಲು’ಕೂಡಾ ಒಂದು Agenda based Novel. ಅಂದರೆ ಲೇಖಕರು ಪ್ರತಿಪಾದಿಸಬೇಕೆಂದಿರುವ ವಿಷಯ ಸೂಚ್ಯವಾಗಿಲ್ಲದೆ, ಢಾಳಾಗಿ ಕಣ್ಣಿಗೆ ಹೊಡೆಯುತ್ತದೆ. ಇದರಲ್ಲಿ ವಿಷಯ ಪ್ರತಿಪಾದನೆಯೇ ಮುಖ್ಯ ಹೊರತು, ಅದಕ್ಕಾಗಿ ಆಯ್ದುಕೊಂಡಿರುವ ಕಾದಂಬರಿ ಮಾಧ್ಯಮದ, ಕಾದಂಬರಿಯಾಗಿ, ಯಶಸ್ಸು ಅಷ್ಟು ಮುಖ್ಯವಲ್ಲ. ಎಲ್ಲಾ ಕಾದಂಬರಿಗಳ , ಎಲ್ಲಾ ಪಾತ್ರಗಳೂ ಕಾದಂಬರಿಕಾರನ ಸೃಷ್ಟಿಯೇ ಆಗಿದ್ದರೂ, ಶ್ರೇಷ್ಠ ಕೃತಿಗಳಲ್ಲಿ ಕೆಲವು ಪಾತ್ರಗಳು ಲೇಖಕನನ್ನೂ ಮೀರಿ ಬೆಳೆಯುತ್ತವೆ. ಓದಿ ಮುಗಿದ ಮೇಲೂ ನಮ್ಮನ್ನು ಕಾಡುತ್ತವೆ. ಭೈರಪ್ಪನವರದ್ದೇ ಆದ ’ಗೃಹಭಂಗ’ದ ನಂಜಮ್ಮ, ಗಂಗಮ್ಮ, ಚೆನ್ನಿಗರಾಯ , ’ವಂಶವೃಕ್ಷ”ದ ಶ್ರೋತ್ರಿ ಇವು ಕೆಲವು ಉದಾಹರಣೆಗಳು. ಆದರೆ ಈ ಕಾದಂಬರಿಯಲ್ಲಿ , ’ಆವರಣ’ದಂತೆ, ಪಾತ್ರಗಳು ಲೇಖಕನ ಅಪ್ಪಣೆಯನ್ನು ಪಾಲಿಸುವುದು ಸ್ಪಷ್ಟವಾಗಿ ಕಾಣುತ್ತದೆ. ಗೊಂಬೆಯಾಟದ ಸೂತ್ರ ಆಡುವುದು ನೋಡುಗರ ಅರಿವಿಗೆ ಬರುತ್ತದೆ. ಅದಕ್ಕೇ ಪುಸ್ತಕ ಓದಿ ಮುಗಿದ ಮೇಲೆ , ಪುಸ್ತಕದ ಉದ್ದೇಶ ನೆನಪಿನಲ್ಲುಳಿದು, ಪಾತ್ರಗಳು ಮರೆಯಾಗುತ್ತವೆ. ಬಹುಷಃ ಇದಕ್ಕೇ ಇರಬೇಕು ಯು.ಆರ‍್ ಅನಂತಮೂರ್ತಿಗಳು ’ಆವರಣ’ವನ್ನು ಕಾದಂಬರಿಯೇ ಅಲ್ಲ ಎಂದದ್ದು. ಕವಲು ಮತ್ತು ಆವರಣ ಗಳನ್ನು ಕಾದಂಬರಿಗಳನ್ನಾಗಿಸದೇ, ಸಂಶೋಧನಾ ಪ್ರಬಂಧಗಳಾಗಿಸಿದ್ದರೆ ಬಹುಷಃ ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದವೇ? ಹೇಳುವುದು ಕಷ್ಟ.

ಹಾಗಾದರೆ ಕಾದಂಬರಿಯಾಗಿ ’ಕವಲು’ ಎಷ್ಟರಮಟ್ಟಿಗೆ ಯಶಸ್ವಿ ಎನ್ನಬಹುದು? ಭೈರಪ್ಪನವರು ತಮ್ಮ ಎಂದಿನ ಕೌಶಲ್ಯದಿಂದ ಒಳ್ಳೆಯ ಕಥೆ ಹೆಣೆದಿದ್ದರೂ, ಈ ’ಕಪ್ಪು-ಬಿಳಿ’ ಕಥಾವಸ್ತುವಿನ ಸಂಭಾವ್ಯತೆ ಪ್ರಶ್ನಾರ್ಹವೇ ಅನಿಸುತ್ತದೆ. ಈ ಸ್ತ್ರೀವಾದೀ ಪಾತ್ರಗಳು, ಸ್ತ್ರೀ ವಾದದ ಕರಾಳ ಸಾಧ್ಯತೆಗಳನ್ನು ಬಿಚ್ಚಿಟ್ಟರೂ, ಹೆಚ್ಚೆಂದರೆ ಇವು ಸಮಾಜದ Fringe elementsಗೆ ಮಾತ್ರವೇ ಸೀಮಿತವಾಗಿ ತೋರುತ್ತವೆ. ಸದ್ಯಕ್ಕಂತೂ ನಮ್ಮ ಸುತ್ತಲಿನ ಸಮಾಜದಲ್ಲಿ ಈ ಅಚ್ಚಗಪ್ಪುಬಣ್ಣಕ್ಕಿಂತ ಬೇರೆ ಬೇರೆ ಸ್ತರದ ಬೂದುಬಣ್ಣವೇ ಹೆಚ್ಚು ಕಾಣುತ್ತದೆ. ನಾಳೆ ಈ ಬೂದು ಬಣ್ಣ ಕರಿಯಾಗಿ ಬದಲಾಗುತ್ತದೆಯೇ? ಕಾಲವೇ ಹೇಳಬೇಕು. ಇದಕ್ಕೆ ಪರಿಹಾರವನ್ನೂ ಪಾತ್ರವೊಂದು ಸೂಚಿಸುತ್ತದೆ “ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ.ಓದಿದ ಎಂಗಸರೆಲ್ಲ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ, ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು”.!

No comments:

Post a Comment